ಮಥುರಾ(ಉತ್ತರ ಪ್ರದೇಶ): ದೇಶದಲ್ಲಿ ಕಳೆದ ಕೆಲ ದಿನಗಳಿಂದ ಆಜಾನ್ ವಿಚಾರವಾಗಿ ವಿವಾದ ಉಂಟಾಗಿತ್ತು. ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗಿಸದಂತೆ ಸೂಚನೆ ನೀಡಲಾಗ್ತಿದೆ. ಇದೇ ವಿಚಾರವನ್ನಿಟ್ಟುಕೊಂಡು ಅನೇಕ ಹಿಂದೂ ಸಂಘಟನೆಗಳು ಪ್ರತಿಭಟನೆ ಸಹ ನಡೆಸುತ್ತಿವೆ. ಇದರ ಮಧ್ಯೆ ಉತ್ತರ ಪ್ರದೇಶದ ಮಥುರಾದಲ್ಲಿ ಮಹತ್ವದ ಬೆಳವಣಿಗೆ ಕಂಡು ಬಂದಿದೆ.
ಮಥುರಾದ ಗೋವರ್ಧನ್ ಪಟ್ಟಣದಲ್ಲಿ ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ಆಜಾನ್ ಮಾಡುವುದನ್ನ ನಿಲ್ಲಿಸುವಂತೆ ಮುಸ್ಲಿಂ ಸಂಘಟನೆ ಆದೇಶ ಹೊರಡಿಸಿದೆ. ಹನುಮ ಜಯಂತಿಯ ದಿನವಾದ ಇಂದು ಹಿಂದೂ ಸಂಘಟನೆಗಳು ಮಸೀದಿ ಮುಂದೆ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ಘೋಷಣೆ ಮಾಡಿದ್ದರು.
ಮಸೀದಿ ಮುಂದೆ ಹಿಂದೂ ಸಂಘಟನೆ ಜನರು ಜಮಾವಣೆಗೊಳ್ಳುತ್ತಿದ್ದಂತೆ ಮುಸ್ಲಿಂ ಸಂಘಟನೆ ಮಸೀದಿಗಳಲ್ಲಿ ಅಳವಡಿಕೆ ಮಾಡಿದ್ದ ಧ್ವನಿವರ್ಧಕ ತೆಗೆದು ಹಾಕಿದೆ. ಜೊತೆಗೆ ಇವುಗಳ ಮೂಲಕ ಆಜಾನ್ ಮಾಡದಂತೆ ಘೋಷಣೆ ಮಾಡಿದೆ. ಇದೀಗ ಮುಂದಿನ ಆದೇಶದವರೆಗೂ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ.
ಇದನ್ನೂ ಓದಿ: ಮದುವೆಗೆ ಕೆಲ ಗಂಟೆ ಮಾತ್ರ ಬಾಕಿ.. ರೇಪ್ ಕೇಸ್ನಲ್ಲಿ ವರನನ್ನೇ ಎತ್ತಾಕ್ಕೊಂಡು ಹೋದ ಪೊಲೀಸರು!
ಇದಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಶ್ಯಾಮ್ ಸುಂದರ್ ಮಾತನಾಡಿ, ಹನುಮ ಜಯಂತಿ ಅಂಗವಾಗಿ ಮಸೀದಿ ಕೆಳಗೆ ಹನುಮಾನ್ ಚಾಲೀಸಾ ಪಠಣಕ್ಕೆ ಮುಂದಾಗಿದ್ದೆವು. ನಮ್ಮ ಗ್ರಾಮದಲ್ಲಿ ಮಸೀದಿ ಇಲ್ಲ. ಆದ್ರೂ, ಜನರಿಗೆ ಕಿರುಕುಳ ನೀಡಲು ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗಲಾಗುತ್ತದೆ.
ದಿನಕ್ಕೆ ಐದು ಸಲ ಆಜಾನ್ ಮಾಡುವುದರಿಂದ ವಿದ್ಯಾರ್ಥಿಗಳು, ರೋಗಿಗಳಿಗೆ ತೊಂದರೆಯಾಗ್ತದೆ. ಇದೀಗ ಅವುಗಳನ್ನ ತೆರವು ಮಾಡಲಾಗಿದೆ ಎಂದರು. ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಆಜಾನ್ ವಿಚಾರವಾಗಿ ವಿವಾದ ಉಂಟಾಗಿತ್ತು. ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗುವುದನ್ನ ನಿಷೇಧ ಮಾಡುವಂತೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.