ಮಲಪ್ಪುರಂ: ಇಲ್ಲಿನ ಬಾಲಕ ಮೊಹಮ್ಮದ್ ಬಸಿತ್ ಇವನಿಗೆ ನಿನ್ನ ಮೆಚ್ಚಿನ ರಾಮಾಯಣ ಶ್ಲೋಕ ಯಾವುದೆಂದು ಕೇಳಿದರೆ, ಒಂಚೂರು ತಡಮಾಡದೆ ಅಯೋಧ್ಯ ಕಾಂಡದ ಶ್ಲೋಕ ಹಾಡಲಾರಂಭಿಸುತ್ತಾನೆ. ರಾಜ್ಯಾಡಳಿತ ಮತ್ತು ಅಧಿಕಾರಗಳು ಎಷ್ಟು ನಶ್ವರ ಎಂಬುದನ್ನು ಕೋಪಗೊಂಡಿದ್ದ ಸಹೋದರ ಲಕ್ಷ್ಮಣನಿಗೆ ಶ್ರೀರಾಮನು ತಿಳಿಸಿ ಹೇಳುವ ಅಯೋಧ್ಯ ಕಾಂಡ ಈ ಬಾಲಕನಿಗೆ ಅಷ್ಟೊಂದು ನಿರರ್ಗಳವಾಗಿದೆ.
ಆಧ್ಯಾತ್ಮ ರಾಮಾಯಣ ಮಾತ್ರವಲ್ಲದೆ, ತುಂಚಾಟು ರಾಮಾನುಜನ್ ಎಳುತಾಚನ್ ಅವರು ರಚಿಸಿದ ರಾಮಾಯಣದ ಮಲಯಾಳಂ ಆವೃತ್ತಿಯನ್ನು ಸಹ ಈ ಬಾಲಕ ಅತ್ಯಂತ ಸರಳವಾಗಿ ಹೇಳುತ್ತಾನೆ. ಇದರಲ್ಲಿನ ಎಲ್ಲ ಪವಿತ್ರ ವಾಕ್ಯಗಳು ಮತ್ತು ಸಂದೇಶಗಳನ್ನು ಈತ ಹೇಳಬಲ್ಲ. ರಾಮಾಯಣ ಮಹಾಕಾವ್ಯದ ಬಗ್ಗೆ ಇಷ್ಟೊಂದು ಆಳವಾದ ಜ್ಞಾನ ಹೊಂದಿರುವುದು ಈ ವಿದ್ಯಾರ್ಥಿಗೆ ಇನ್ನೊಂದು ರೀತಿಯಲ್ಲಿ ಸಾಧನೆ ಮಾಡಲು ಸಹಾಯಕವಾಗಿದೆ. ಬಸಿತ್ ತನ್ನ ಇನ್ನೊಬ್ಬ ಸ್ನೇಹಿತ ಮೊಹಮ್ಮದ್ ಜಬೀರ್ ಪಿಕೆ ಎಂಬಾತನೊಂದಿಗೆ ಸೇರಿಕೊಂಡು ಪ್ರಮುಖ ಪುಸ್ತಕ ಪ್ರಕಾಶನ ಕಂಪನಿಯೊಂದು ಆನ್ಲೈನ್ ಮೂಲಕ ನಡೆಸುವ ರಾಮಾಯಣ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ.
ಬಸಿತ್ ಮತ್ತು ಜಬೀರ್ ಇವರಿಬ್ಬರು, ಉತ್ತರ ಕೇರಳ ಭಾಗದ ವಲಂಚೇರಿಯಲ್ಲಿರುವ ಕೆಕೆಎಸ್ಎಂ ಇಸ್ಲಾಮಿಕ್ ಅಂಡ್ ಆರ್ಟ್ಸ್ ಕಾಲೇಜಿನಲ್ಲಿ ಎಂಟು ವರ್ಷದ ವಾಫಿ ಪ್ರೊಗ್ರಾಮ್ ಅಧ್ಯಯನ ಮಾಡುತ್ತಿದ್ದಾರೆ. ರಾಮಾಯಣ ಮಾಸಿಕದ ಅಂಗವಾಗಿ ಕಳೆದ ತಿಂಗಳು ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಇವರಿಬ್ಬರು ಪ್ರಥಮ ಐದು ವಿಜೇತರಲ್ಲಿ ಸ್ಥಾನ ಗಳಿಸಿದ್ದಾರೆ. ಇಸ್ಲಾಮಿಕ್ ಕಾಲೇಜಿನ ವಿದ್ಯಾರ್ಥಿಗಳು ರಾಮಾಯಣ ಸ್ಪರ್ಧೆಯಲ್ಲಿ ವಿಜೇತರಾಗಿರುವುದು ಸಾಕಷ್ಟು ಮಾಧ್ಯಮಗಳ ಗಮನ ಸೆಳೆದಿದೆ. ಅಲ್ಲದೆ ವಿವಿಧ ಸಮುದಾಯಗಳ ಗಣ್ಯರು ಈ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಗೋವಾ ರಾಜಕಾರಣಿಯಿಂದ ಮಹದಾಯಿ ಕ್ಯಾತೆ: ಕರ್ನಾಟಕದ ಪ್ರಯತ್ನ ತಡೆಯಲು ಪತ್ರ
ತಮ್ಮ ಬಾಲ್ಯದಿಂದಲೇ ರಾಮಾಯಣ ಮಹಾಕಾವ್ಯದ ಬಗ್ಗೆ ತಿಳಿದಿತ್ತು. ಆದರೆ ವಾಫಿ ಕೋರ್ಸ್ ಸೇರಿದ ನಂತರ ರಾಮಾಯಣ ಸೇರಿದಂತೆ ಇನ್ನೂ ಹಲವಾರು ಹಿಂದೂ ಗ್ರಂಥಗಳನ್ನು ಓದಿ ತಿಳಿದುಕೊಳ್ಳಲಾರಂಭಿಸಿದೆವು. ವಾಫಿ ಕೋರ್ಸ್ನಲ್ಲಿ ಎಲ್ಲ ಧರ್ಮಗಳ ಬಗ್ಗೆ ಕಲಿಸಲಾಗುತ್ತದೆ ಎಂದು ಈ ವಿದ್ಯಾರ್ಥಿಗಳು ಹೇಳುತ್ತಾರೆ. ಕಾಲೇಜ್ ಲೈಬ್ರರಿಯಲ್ಲಿ ಇತರ ಎಲ್ಲ ಧರ್ಮಗಳ ಬಗೆಗಿನ ಸಾಕಷ್ಟು ಗ್ರಂಥಗಳು ಲಭ್ಯವಿರುವುದು ಕೂಡ ತಮ್ಮ ಅಧ್ಯಯನಕ್ಕೆ ಸಹಕಾರಿಯಾಗಿದೆ ಎಂದು ಇವರು ಹೇಳುತ್ತಾರೆ.