ನವದೆಹಲಿ: ರಾಷ್ಟ್ರ ರಾಜಧಾನಿಯ ಆನಂದ್ ಪರ್ವತ ಎಂಬ ಪ್ರದೇಶದಲ್ಲಿ ಕೇವಲ 300 ರೂಪಾಯಿಗೆ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ವಿವರ:
ಶೈಲೇಂದ್ರ ಎಂಬಾತ ಆನಂದ್ ಪರ್ವತ ಪ್ರದೇಶದ ತನ್ನ ಮನೆಯ ಹತ್ತಿರದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ತಂದೆ-ತಾಯಿ ಇಲ್ಲ. ಹಾಗಾಗಿ, ಅಣ್ಣನ ಜೊತೆ ವಾಸವಿದ್ದ. ಕೆಲವು ದಿನಗಳ ಹಿಂದೆ ಸ್ನೇಹಿತ ರವಿ ಎಂಬಾತನಿಂದ 300 ರೂಪಾಯಿ ಸಾಲ ಪಡೆದಿದ್ದನಂತೆ. ನಿನ್ನೆ ಮಧ್ಯಾಹ್ನದ ಹೊತ್ತಿಗೆ ರವಿ ಶೈಲೇಂದ್ರನ ಬಳಿ ಕೊಟ್ಟ ಹಣ ವಾಪಸ್ ಕೇಳಿದ್ದಾನೆ. ಅದಕ್ಕೆ ಶೈಲೇಂದ್ರ ಸಂಜೆಯೊಳಗೆ ಹಣ ಹಿಂದಿರುಗಿಸುವ ಭರವಸೆ ಕೊಟ್ಟಿದ್ದಾನೆ. ಆದರೆ ಇದಕ್ಕೊಪ್ಪದ ರವಿ ತನ್ನ ಸ್ನೇಹಿತರೊಂದಿಗೆ ಶೈಲೇಂದ್ರನ ಜೊತೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಜಗಳ ತಾರಕಕ್ಕೆೇರಿದೆ. ಕೋಪದ ಕೈಗೆ ಬುದ್ದಿ ಹೇಳಿದ ರವಿ, ಶೈಲೇಂದ್ರನ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದೇ ಬಿಟ್ಟಿದ್ದ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ರಕ್ತದ ಮಡುವಿನಲ್ಲಿದ್ದ ಶೈಲೇಂದ್ರನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾದ ಕಾರಣ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ಆತನ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
ಪ್ರಕರಣದಲ್ಲಿ ಕೆಲವು ಅಪ್ರಾಪ್ತರು ಸಹ ಭಾಗಿಯಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸದ್ಯ ರವಿ ಹಾಗೂ ಆತನ ಕೆಲವು ಸಹಚರರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.