ಪುಣೆ: ವಿವಾಹಿತ ಮಹಿಳೆಯೊಬ್ಬಳನ್ನು 35 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಕೊಲೆಗೈದ ಆರೋಪಿಯನ್ನು ಜೈರಾಮ್ ಉತ್ತರೇಶ್ವರ್ ಚೌರೆ ಎಂದು ಗುರುತಿಸಲಾಗಿದೆ. ಬೀಡ್ ಜಿಲ್ಲೆಯ ನಿವಾಸಿ ಸೂರಜ್ ಗೋಲು ಧಾಟೆ ಎಂಬ ಸಹಚರನೊಂದಿಗೆ ಆರೋಪಿಯನ್ನು ಬುಧವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು ರೂಪಾಂಜಲಿ ಸಂಭಾಜಿ ಜಾಧವ್ ಎಂದು ಗುರುತಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮೃತಳು ತನ್ನ ಪತಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದಳು. ಆದರೆ ಆಕೆ ಆರೋಪಿ ಜೈರಾಮ್‌ನ ಸಂಪರ್ಕಕ್ಕೆ ಬಂದ ನಂತರ ಆತನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ಸಂಬಂಧ ಆರಂಭವಾಗಿ ಎರಡು ವರ್ಷಗಳ ನಂತರ, ತನ್ನನ್ನು ಮದುವೆಯಾಗುವಂತೆ ಮಹಿಳೆ ಜೈರಾಮ್ನನ್ನು ಒತ್ತಾಯಿಸಿದ್ದಳು. ಆದರೆ ಆಕೆಯನ್ನು ವಿವಾಹವಾಗುವುದು ಜೈರಾಮ್ಗೆ ಇಷ್ಟವಿರಲಿಲ್ಲ. ಹೀಗಾಗಿ ಹತಾಶನಾದ ಆರೋಪಿ ತನ್ನ ಸ್ನೇಹಿತ ಸೂರಜ್‌ನೊಂದಿಗೆ ಸೇರಿಕೊಂಡು ತನ್ನ ಮಹಿಳಾ ಸಂಗಾತಿಯನ್ನು ಕೊಲ್ಲಲು ಸಂಚು ರೂಪಿಸಿದ್ದ.
ಆರೋಪಿಯ ಹೇಳಿಕೆಯ ಪ್ರಕಾರ, ಕಾಡಿನಲ್ಲಿ ಚಿನ್ನ ಸಿಕ್ಕಿದೆ, ತೋರಿಸುತ್ತೇನೆ ಎಂಬ ನೆಪದಲ್ಲಿ ಆತ ರೂಪಾಂಜಲಿಯನ್ನು ಪುಣೆಯಿಂದ ಕಲ್ಯಾಣ್ ಗ್ರಾಮಾಂತರ ಪ್ರದೇಶದ ಕಾಡಿಗೆ ಕರೆದೊಯ್ದಿದ್ದ. ನಂತರ ಇಬ್ಬರೂ ಆರೋಪಿಗಳು ಆಕೆಯನ್ನು 35 ಬಾರಿ ಹರಿತವಾದ ಆಯುಧದಿಂದ ಇರಿದು ಬರ್ಬರವಾಗಿ ಕೊಂದು ಶವವನ್ನು ಕಾಡಿನಲ್ಲಿ ಬಿಟ್ಟು ಪರಾರಿಯಾಗಿದ್ದರು. ಡಿ.27ರಂದು ಮಾಹಿತಿ ಪಡೆದ ಕಲ್ಯಾಣ್ ತಾಲೂಕು ಪೊಲೀಸರು ಅರಣ್ಯಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಸ್ಥಳದಲ್ಲಿ ಪೊಲೀಸರಿಗೆ ಮೃತದೇಹದ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಈ ಸುಳಿವನ್ನು ಆಧರಿಸಿ ಉಪ ವಿಭಾಗಾಧಿಕಾರಿ ರಾಮ್ ಭಾಲ್ ಸಿಂಗ್ ಅವರ ನೇತೃತ್ವದಲ್ಲಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಂದೀಪ್ ಶಿಂಗ್ಟೆ, ಕಾನ್‌ಸ್ಟೆಬಲ್ ದರ್ಶನ್ ಸಾವ್ಲೆ, ಇರ್ಫಾನ್ ಸೈಯದ್, ಪೊಲೀಸ್ ನಾಯಕ್ ರಾಹುಲ್ ಬಾಗುಲ್, ಕಾನ್‌ಸ್ಟೆಬಲ್ ಯೋಗೀಶ್ ವಾಘೆರೆ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಜಿತೇಂದ್ರ ಠಾಕೂರ್ ಅವರು ಪ್ರಕರಣದ ತನಿಖೆ ಆರಂಭಿಸಿದ್ದರು. ಬುಧವಾರ ಸಂಜೆ ಆರೋಪಿ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲೂ ನಡೆದಿತ್ತು ಭಯಾನಕ ಪ್ರಕರಣ : 19ರ ಹರೆಯದ ಬಿಟೆಕ್ ವಿದ್ಯಾರ್ಥಿನಿಯೊಬ್ಬಳು ತನ್ನ ಲವ್ ಪ್ರಸ್ತಾವನೆಯನ್ನು ತಿರಸ್ಕರಿಸಿದ ಆರೋಪದ ಮೇಲೆ ಯುವಕನೊಬ್ಬ ಆಕೆಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಬೆಂಗಳೂರಿನ ಕಾಲೇಜೊಂದರಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ವಿದ್ಯಾರ್ಥಿನಿಯನ್ನು ಇರಿದ ನಂತರ ದುಷ್ಕರ್ಮಿ ತನ್ನ ಎದೆಗೆ ಚಾಕುವಿನಿಂದ ಇರಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಹರಿಹರ: ಚಿಕನ್ ಸಾಂಬಾರ್ ಮಾಡದ ಪತ್ನಿಯನ್ನು ನಶೆಯಲ್ಲಿ ಇರಿದು ಕೊಂದ ಕಿರಾತಕ ಪತಿ