ನವದೆಹಲಿ: ಶ್ರದ್ಧಾ ವಾಲ್ಕರ್ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾ ಸಾಕೇತ್ ಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಗುರುವಾರ ಹಿಂಪಡೆದಿದ್ದಾನೆ. ಅರ್ಜಿಯನ್ನು ತಪ್ಪಾಗಿ ಸಲ್ಲಿಸಲಾಗಿತ್ತು ಎಂಬ ಕಾರಣ ನೀಡಿ ಹಿಂಪಡೆದಿದ್ದಾನೆ. ಡಿಸೆಂಬರ್ 17 ರಂದು ತಾನು ವಕಾಲತ್ಗೆ ಸಹಿ ಹಾಕಿದ್ದೆ, ಆದರೆ, ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದ.
ಜಾಮೀನು ಅರ್ಜಿಯನ್ನು ತಪ್ಪಾಗಿ ಸಲ್ಲಿಸಲಾಗಿದೆ ಎಂದು ಪೂನಾವಾಲಾ ಅವರಿಂದ ಇಮೇಲ್ ಮೂಲಕ ನ್ಯಾಯಾಲಯಕ್ಕೆ ಮನವಿ ಬಂದಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ವೃಂದಾ ಕುಮಾರಿ ಹೇಳಿದ್ದಾರೆ.
ಆದಾಗ್ಯೂ, ಜಾಮೀನು ಅರ್ಜಿಯನ್ನು ಬಾಕಿ ಇಡಬೇಕೇ ಎಂದು ನ್ಯಾಯಾಲಯ ಕೇಳಿದಾಗ, ನನ್ನ ವಕೀಲರೊಂದಿಗೆ ಮಾತನಾಡಿದ ನಂತರ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳಲು ಬಯಸುತ್ತೇನೆ ಎಂದು ಪೂನಾವಾಲಾ ಹೇಳಿದ್ದಾನೆ.
ಡಿಸೆಂಬರ್ 16 ರಂದು ಜಾಮೀನು ಕೋರಿ ಅಫ್ತಾಬ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಡಿಸೆಂಬರ್ 9 ರಂದು ನ್ಯಾಯಾಲಯವು ಪೂನಾವಾಲಾ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿತ್ತು. ನವೆಂಬರ್ 12 ರಂದು ಆತನನ್ನು ಬಂಧಿಸಲಾಗಿತ್ತು ಮತ್ತು ಪ್ರಸ್ತುತ ತಿಹಾರ್ ಜೈಲಿನಲ್ಲಿ ಆತ ಬಂಧಿಯಾಗಿದ್ದಾನೆ.
ಶ್ರದ್ಧಾ ಮತ್ತು ಅಫ್ತಾಬ್ 2018 ರಲ್ಲಿ ಡೇಟಿಂಗ್ ಅಪ್ಲಿಕೇಶನ್ 'ಬಂಬಲ್' ಮೂಲಕ ಪರಿಚಯವಾಗಿದ್ದರು. ಇಬ್ಬರೂ ಮೇ 8 ರಂದು ದೆಹಲಿಗೆ ಬಂದಿದ್ದರು. 2022ರ ಮೇ 18 ರಂದು ಆಫ್ತಾಬ್ ಶ್ರದ್ಧಾಳನ್ನು ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ 18 ದಿನಗಳ ಕಾಲ ಅವುಗಳನ್ನು ವಿವಿಧ ಸ್ಥಳಗಳಲ್ಲಿ ಎಸೆದಿದ್ದ.
ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಪ್ರಕರಣ: ಆಟೋ ಚಾಲಕನ ಚಿಕಿತ್ಸಾ ವೆಚ್ಚ ಭರಿಸುವ ಆಶ್ವಾಸನೆ ನೀಡಿದ ಡಿಸಿ