ಮುಂಬೈ: ನ್ಯೂಯಾರ್ಕ್‌ನಿಂದ ಮರಳಿದ ಭಾರತೀಯ ಮೂಲದ ವ್ಯಕ್ತಿಗೆ ಒಮಿಕ್ರಾನ್ ವೈರಸ್ ದೃಢವಾಗಿದೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ನವೆಂಬರ್ 9ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆತನಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು.
ಈ ವೇಳೆ ಆತನಿಗೆ ಕೊರೊನಾ ದೃಢವಾಗಿತ್ತು. ಈ ಬೆನ್ನಲ್ಲೇ ಆತನ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಒಮಿಕ್ರಾನ್ ದೃಢಪಟ್ಟಿದೆ.
ಯಾವುದೇ ಸೋಂಕಿನ ಲಕ್ಷಣಗಳಿಲ್ಲದ ಈತ ಅಮೆರಿಕದಲ್ಲಿ ಮೂರು ಡೋಸ್ ಫೈಜರ್ ಕೊರೊನಾ ಲಸಿಕೆ ಪಡೆದುಕೊಂಡಿದ್ದ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈತನ ಸಂಪರ್ಕಕ್ಕೆ ಬಂದವರಿಗೆ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ.
ಈ ಪ್ರಕರಣದ ಮೂಲಕ ಮುಂಬೈನಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾದಂತಾಗಿದೆ. ಆದರೆ ಈ ಸಂಖ್ಯೆಗಳ ಪೈಕಿ ಮುಂಬೈ ಹೊರತುಪಡಿಸಿ ಹೊರರಾಜ್ಯದವರು ಸಹ ಇದ್ದಾರೆ. ಇವರಲ್ಲಿ 13 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ದೇಶದಲ್ಲಿ ಕೊರೊನಾ ಸೋಂಕಿತರಿಗಿಂತ ಚೇತರಿಸಿಕೊಂಡವರೇ ಹೆಚ್ಚು: 113ಕ್ಕೇರಿದ ಒಮಿಕ್ರಾನ್ ಕೇಸ್ಗಳು