ಮುಂಬೈ: ಡ್ರೋನ್‌ಗಳು ಮತ್ತು ಇತರ ರಿಮೋಟ್ ಕಂಟ್ರೋಲ್ ಅಥವಾ ಮೈಕ್ರೋ-ಲೈಟ್ ಏರ್‌ಕ್ರಾಫ್ಟ್‌ಗಳನ್ನು ನಗರದಲ್ಲಿ 30 ದಿನಗಳ ಕಾಲ ಹಾರಿಸದಂತೆ ಮುಂಬೈ ಪೊಲೀಸ್ ಇಲಾಖೆ ಆದೇಶಿಸಿದೆ. ಸಂಭವನೀಯ ಭಯೋತ್ಪಾದಕ ಚಟುವಟಿಕೆಗಳಿಗೆ ಇವುಗಳ ಬಳಕೆ ತಡೆಯಲು ಈ ಆದೇಶ ಹೊರಡಿಸಲಾಗಿದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144 ರ ಅಡಿ ಮುಂಬೈ ಪೊಲೀಸರು ಬುಧವಾರ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಅಧಿಸೂಚನೆಯ ಪ್ರಕಾರ, ಈ ಆದೇಶವು ನವೆಂಬರ್ 13 ರಿಂದ ಡಿಸೆಂಬರ್ 12 ರ ನಡುವೆ ಜಾರಿಯಲ್ಲಿರುತ್ತದೆ.
ವಿವಿಐಪಿಗಳನ್ನು ಗುರಿಯಾಗಿಸಲು ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯವನ್ನುಂಟುಮಾಡಲು, ಭಯೋತ್ಪಾದಕ ಮತ್ತು ದೇಶ ವಿರೋಧಿ ಶಕ್ತಿಗಳು ಡ್ರೋನ್, ರಿಮೋಟ್ ನಿಯಂತ್ರಿತ ಮೈಕ್ರೋ ಲೈಟ್ ಏರ್‌ಕ್ರಾಫ್ಟ್, ವೈಮಾನಿಕ ಕ್ಷಿಪಣಿಗಳು ಅಥವಾ ಪ್ಯಾರಾಗ್ಲೈಡರ್‌ಗಳನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.
ಈ ಮೂಲಕ ಬೃಹನ್ಮುಂಬೈ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಯಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಸಂಭವನೀಯ ವಿಧ್ವಂಸಕ ಕೃತ್ಯಗಳನ್ನು ತಡೆಯಲು ನಿರ್ಬಂಧ ಅಗತ್ಯ ಎಂದು ಅದು ಹೇಳಿದೆ.
ಮುಂದಿನ 30 ದಿನಗಳ ಕಾಲ ಪೊಲೀಸ್ ಇಲಾಖೆಯು ತನಗಾಗಿ ನಡೆಸುವ ವೈಮಾನಿಕ ಸಮೀಕ್ಷೆ ಅಥವಾ ಉಪ ಪೊಲೀಸ್ ಆಯುಕ್ತರ (ಕಾರ್ಯಾಚರಣೆ) ಲಿಖಿತ ಅನುಮತಿ ಪಡೆದ ಸಂದರ್ಭಗಳನ್ನು ಹೊರತುಪಡಿಸಿ, ಬೃಹನ್‌ಮುಂಬೈ ಪೊಲೀಸ್ ಕಮಿಷನರೇಟ್ ಪ್ರದೇಶದ ವ್ಯಾಪ್ತಿಯಲ್ಲಿ ಡ್ರೋನ್‌ಗಳು, ರಿಮೋಟ್-ನಿಯಂತ್ರಿತ ಮೈಕ್ರೋ-ಲೈಟ್ ಏರ್‌ಕ್ರಾಫ್ಟ್, ಪ್ಯಾರಾಗ್ಲೈಡರ್‌ಗಳು, ಪ್ಯಾರಾ ಮೋಟಾರ್‌ಗಳು, ಬಿಸಿ ಗಾಳಿಯ ಬಲೂನ್‌ಗಳು ಮತ್ತು ಖಾಸಗಿ ಹೆಲಿಕಾಪ್ಟರ್‌ಗಳ ಹಾರಿಸುವ ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಾದಪ್ಪನ ದೀಪಾವಳಿ ತೇರು ಸಂಪನ್ನ: ಡ್ರೋನ್ನಲ್ಲಿ ವೈಭವದ ದೃಶ್ಯ ಸೆರೆ