ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ವಾಣಿಜ್ಯ ನಗರಿ ಮುಂಬೈನಲ್ಲೂ ಕೂಡ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಮೇಯರ್ ಅಖಾಡಕ್ಕಿಳಿದಿದ್ದಾರೆ.
ಹೌದು, ಮೇಯರ್ ಕಿಶೋರಿ ಪಡ್ನೇಕರ್ ಬುಧವಾರ ರಸ್ತೆಗಿಳಿದಿದ್ದು, ಮಾಸ್ಕ್ ಧರಿಸುವಂತೆ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೈಮುಗಿದು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಮಂಗಳವಾರದಿಂದ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದು, ಶೇಕಡಾ 60ರಷ್ಟು ಮಂದಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಸ್ವಚ್ಛತೆ ಪಾಲಿಸುತ್ತಿಲ್ಲ ಎಂದು ಮೇಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 98% ಇಂಟರ್ನೆಟ್ ಸಂಪರ್ಕ ಸಂಪೂರ್ಣ ; 100% ಆಗಲು ಒತ್ತು!
ಸರ್ಕಾರವನ್ನು ಮತ್ತೊಂದು ಲಾಕ್ಡೌನ್ ಹೇರುವಂತೆ ಮಾಡಬೇಡಿ. ದಯವಿಟ್ಟು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಎಂದು ಸಾರ್ವಜನಿಕರಲ್ಲಿ ಕಿಶೋರಿ ಪಡ್ನೇಕರ್ ಮನವಿ ಮಾಡಿಕೊಂಡಿದ್ದಾರೆ.
ಕೆಲವು ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಬೈಕುಲದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ಗೆ ಪ್ರಯಾಣಿಸಿ, ಪ್ರಯಾಣಿಕರಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಮನವಿ ಮಾಡಿದರು.
ಇದಾದ ನಂತರ ಸೇತುವೆಗಳ ಮೇಲೆಯೂ ಸಂಚಾರ ಮಾಡಿ, ಪಾನ್ ಶಾಪ್ಗಳ ಬಳಿ, ರಸ್ತೆ ಬದಿಯ ವ್ಯಾಪಾರಿಗಳ ಜೊತೆ ಮಾತನಾಡಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ರಾಜ್ಯದಲ್ಲಿ ಕೊರೊನಾ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕೆಂದು ಮನವಿ ಮಾಡಿದರು.