ಮುಂಬೈ: ಕೊರೊನಾ ವೈರಸ್ ಹಾವಳಿಯಿಂದ ಬಂದ್ ಆಗಿದ್ದ ಮುಂಬೈ ಸ್ಥಳೀಯ ರೈಲು ಸಂಚಾರ ಇದೀಗ ಪುನಾರಂಭಗೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹತ್ವದ ಆದೇಶ ಹೊರಹಾಕಿದ್ದಾರೆ. ಸ್ಥಳೀಯ ರೈಲು ಸೇವೆ ಮತ್ತೆ ಆರಂಭಗೊಳ್ಳುತ್ತಿರುವ ಕಾರಣ ಅನೇಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದಂತಾಗಿದೆ.
ಮುಂಬೈ ಮತ್ತು ಮುಂಬೈ ಪೆಟ್ರೊಪಾಲಿಟಿನ್ ಪ್ರದೇಶಗಳಲ್ಲಿ ಫೆ. 1ರಿಂದ ಇದರ ಸೇವೆ ಆರಂಭಗೊಳ್ಳಲಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಹಾಗೂ ರೈಲುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಬೆಳಗ್ಗೆ 7ಗಂಟೆಯಿಂದ 12 ಗಂಟೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಇದರ ಸೇವೆ ಲಭ್ಯವಾಗಲಿದೆ. ಕೊರೊನಾ ವೈರಸ್ ಕಾರಣ ಮಾರ್ಚ್ 23ರಿಂದ ಇದರ ಸೇವೆ ಸ್ಥಗಿತಗೊಳಿಸಿ ಮಹತ್ವದ ಆದೇಶ ಹೊರಹಾಕಲಾಗಿತ್ತು. ರೈಲುಗಳಲ್ಲಿ ಮುಂಚೂಣಿ ಕಾರ್ಮಿಕರು, ಆರೋಗ್ಯ ಸಿಬ್ಬಂದಿ ಹಾಗೂ ಮಹಿಳಾ ಪ್ರಯಾಣಿಕರು ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಪಾಸ್ ಪಡೆದವರಿಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.