ಮುಂಬೈ: ಉಪನಗರ ರೈಲು (ಸಬ್ ಅರ್ಬನ್ ಟ್ರೈನ್) ಸೇವೆಯು ಆಗಸ್ಟ್ 15 ರಿಂದ ಪುನರಾರಂಭವಾಗಲಿದ್ದು, ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರು ಪ್ರಯಾಣಿಸಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.
ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ 14 ದಿನಗಳ ಬಳಿಕ ರೈಲಿನಲ್ಲಿ ಸಂಚರಿಸಲು ಅವಕಾಶವಿದೆ. ಕೋವಿಡ್ ನಿಯಮಗಳನ್ನು ಕೊಂಚ ಸಡಿಲಗೊಳಿಸಲಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೆ ಮತ್ತೆ ಲಾಕ್ ಡೌನ್ ಮಾಡಬೇಕಾಗುತ್ತದೆ. ಆದ್ದರಿಂದ, ಜನರು ಮೈ ಮರೆಯಬಾರದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ಬಯಸುವವರು ವಿಶೇಷವಾಗಿ ಸಿದ್ದಪಡಿಸಲಾಗಿರುವ ಆ್ಯಪ್ನಲ್ಲಿ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿಯನ್ನು ಅಪ್ಡೇಟ್ ಮಾಡಬೇಕು. ಬಳಿಕ ಆ್ಯಪ್ ಮುಖಾಂತರ ಅಥವಾ ನೇರವಾಗಿ ನಿಲ್ದಾಣಕ್ಕೆ ತೆರಳಿ ಟಿಕೆಟ್ ಪಡೆದುಕೊಳ್ಳಬಹುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆ 2021ರ ನೋಂದಣಿ ದಿನಾಂಕ ವಿಸ್ತರಣೆ
ಯಾರಲ್ಲಿ ಮೊಬೈಲ್ ಫೋನ್ ಇಲ್ಲವೋ, ಅವರು ಮುನ್ಸಿಪಲ್ ಕಚೇರಿಗೆ ಅಥವಾ ಉಪನಗರ ರೈಲ್ವೆ ನಿಲ್ದಾಣಗಳಲ್ಲಿ ಪಾಸ್ ಪಡೆದುಕೊಳ್ಳಬಹುದು. ಈ ಪಾಸ್ ಕ್ಯೂ ಆರ್ ಕೋಡ್ ಹೊಂದಿರಲಿದ್ದು, ರೈಲು ನಿಲ್ದಾಣದ ಸಿಬ್ಬಂದಿ ಅದನ್ನು ಪರಿಶೀಲನೆ ಮಾಡಲಿದ್ದಾರೆ. ಯಾರೂ ಕೂಡ ಅಕ್ರಮವಾಗಿ ಪಾಸ್ ಪಡೆದುಕೊಳ್ಳದಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಠಾಕ್ರೆ ಹೇಳಿದ್ದಾರೆ.
ಇಂದು ಮಹಾರಾಷ್ಟ್ರ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಯಲಿದ್ದು, ಬಳಿಕ ಮಾಲ್, ರೆಸ್ಟೋರೆಂಟ್ ಸೇರಿದಂತೆ ಇತರ ಉದ್ದಿಮೆಗಳ ಪುನರಾರಂಭಕ್ಕೆ ಅವಕಾಶ ನೀಡುವ ಬಗ್ಗೆ ನಿರ್ಧಾರವಾಗಲಿದೆ.