ಮುಂಬೈ: ವ್ಯಾಪಕ ಮಳೆಯಿಂದಾಗಿ ಅಪಾಯಕಾರಿ ಮಟ್ಟದಲ್ಲಿ ನದಿ, ಸಮುದ್ರಗಳು ಉಕ್ಕಿ ಹರಿಯುತ್ತಿವೆ. ಪ್ರಕೃತಿ ನರ್ತನದ ನಡುವೆಯೂ ವೀಕೆಂಡ್ ರಜೆಯಲ್ಲಿ ಜನರು ಮೋಜು ಮಸ್ತಿಗಾಗಿ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದಾರೆ. ಇದು ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ. ಮಹಾರಾಷ್ಟ್ರದ ಮಾರ್ವೆ ಬೀಚಿಗೆ ಭಾನುವಾರ ತೆರಳಿದ್ದ ಮೂವರು ಬಾಲಕರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದರು. ಇಂದು ಅವರ ಮೃತದೇಹಗಳು ಪತ್ತೆಯಾಗಿವೆ.
ಮೃತ ಬಾಲಕರು 12 ರಿಂದ 16 ವರ್ಷದೊಳಗಿನವರಾಗಿದ್ದಾರೆ. ಐವರು ಬಾಲಕರು ಭಾನುವಾರ ಮುಂಬೈನ ಮಾರ್ವೆ ಬೀಚಿಗೆ ತೆರಳಿದ್ದರು. ನೀರಿನಾಟದಲ್ಲಿ ಮೈಮರೆತಿದ್ದ ಹುಡುಗರು ಸೆಳೆತಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮಾಹಿತಿ ಸಿಕ್ಕ ತಕ್ಷಣವೇ ಅಗ್ನಿಶಾಮಕ ದಳ ಸಿಬ್ಬಂದಿ, ಕೋಸ್ಟ್ಗಾರ್ಡ್, ಪೊಲೀಸರು, ನೌಕಾಪಡೆಯ ರಕ್ಷಣಾ ಪಡೆಗಳು ಧಾವಿಸಿ ಬಂದು ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ, ಇನ್ನೂ ಮೂವರು ನಾಪತ್ತೆಯಾಗಿದ್ದರು. ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಎಲ್ಲೂ ಪತ್ತೆಯಾಗಿರಲಿಲ್ಲ. ಬಳಿಕ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಸೇರಿದಂತೆ ಹೆಲಿಕಾಪ್ಟರ್ ಕೂಡ ಬಳಸಲಾಗಿತ್ತು. ಸತತ ಪ್ರಯತ್ನದ ನಡುವೆಯೂ ಮಕ್ಕಳನ್ನು ಪತ್ತೆ ಮಾಡಲಾಗಿರಲಿಲ್ಲ. ಸೋಮವಾರ ಬೆಳಗ್ಗೆ ಬಾಲಕರ ಶವಗಳು ಬೀಚ್ ಬಳಿ ಸಿಕ್ಕಿವೆ. ಶವಗಳನ್ನು ವಶಕ್ಕೆ ಪಡೆದ ಪೊಲೀಸರು, ಶತಾಬ್ದಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಬಳಿಕ ಆಯಾ ಕುಟುಂಬಸ್ಥರಿಗೆ ಮೃತದೇಗಳನ್ನು ನೀಡಲಾಗಿದೆ.
ಮಕ್ಕಳೆದುರೇ ಕೊಚ್ಚಿ ಹೋದ ಅಮ್ಮ: 2 ದಿನಗಳ ಹಿಂದಷ್ಟೇ ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಮಹಿಳೆಯೊಬ್ಬರು ಭಾರಿ ಅಲೆಯ ಹೊಡೆತಕ್ಕೆ ಸಿಲುಕಿ ಮಕ್ಕಳು, ಪತಿ ಎದುರೇ ಕೊಚ್ಚಿ ಹೋದ ದುರಂತ ನಡೆದಿತ್ತು. ನೀರಿನ ದೊಡ್ಡ ಅಲೆಗೆ ಸಿಲುಕಿದ ಮಹಿಳೆ ನೋಡ ನೋಡುತ್ತಿದ್ದಂತೆ ಮುಳುಗಿದ್ದರು. ಕಣ್ಣೆದುರೇ ಪತ್ನಿ ಮರೆಯಾಗಿದ್ದರೆ, ಅವರನ್ನು ಕಳೆದುಕೊಂಡ ಅಸಹಾಯಕ ಪತಿ ಮತ್ತು ಮಕ್ಕಳು ಕಿರುಚಾಟ ಮನಕಲಕುವಂತಿತ್ತು. ಈ ಹೃದಯ ವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಬಾಂದ್ರಾದ ಮುಂಬೈನ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ದಂಪತಿ ಬಂಡೆಯ ಮೇಲೆ ಕುಳಿತಿದ್ದರು. ಅವರ ಮಕ್ಕಳು ಆ ಸಂತಸದ ಕ್ಷಣವನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದರು. ಈ ವೇಳೆ ಭೀಕರ ಅಲೆ ಅಪ್ಪಳಿಸಿ, ಕಣ್ಣು ಮಿಟುಕಿಸುವುದರಲ್ಲಿ ಪತಿ ಜತೆಗಿದ್ದ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಪತಿ ದುರಂತದಲ್ಲಿ ಪಾರಾದರೆ, ಮಕ್ಕಳು ಅಸಹಾಯಕತೆಯಿಂದ ಮಮ್ಮಿ ಮಮ್ಮಿ ಎಂದು ಕಿರುಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದಕ್ಕೂ ಮೊದಲು ವಿಹಾರಕ್ಕೆಂದು ತೆರಳಿದ್ದ ನಾಲ್ವರು ಮಕ್ಕಳು ಸೆಲ್ಫಿ ತೆಗೆದುಕೊಳ್ಳುವ ವೇಳೆ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ದುರಂತ ಚಂದ್ರಾಪುರದಲ್ಲಿ ನಡೆದಿತ್ತು. ಶೋಧ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಪತ್ತೆ ಮಾಡಲಾಗಿತ್ತು.
ಇದನ್ನೂ ಓದಿ: ಸಮುದ್ರದ ಅಲೆಗೆ ಮಕ್ಕಳೆದುರೇ ಕೊಚ್ಚಿ ಹೋದ ಅಮ್ಮ.. ಮಮ್ಮಿ.. ಮಮ್ಮಿ.. ಎಂದು ಕಂದಮ್ಮಗಳ ಆಕ್ರಂದನ - ವಿಡಿಯೋ