ಗಾಜಿಯಾಬಾದ್ (ಉತ್ತರಪ್ರದೇಶ): ಇಲ್ಲಿನ ವಿಜಯನಗರ ಪ್ರದೇಶದಲ್ಲಿ ನೋವಿನ ದುರ್ಘಟನೆಯೊಂದು ಬೆಳಕಿಗೆ ಬಂದಿದೆ. ನಿರ್ಮಾಣ ಹಂತದಲ್ಲಿದ್ದ ಚರಂಡಿಯ ಗೋಡೆ ಕುಸಿದು ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ಡಿಎವಿ ಚೌಕ್ ಬಳಿ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಲ್ಲಿ ಸುಮಾರು 16 ಕಾರ್ಮಿಕರು ಈ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ನಿರ್ಮಾಣ ಹಂತದ ಚರಂಡಿಯ ಗೋಡೆ ಏಕಾಏಕಿ ಕುಸಿದಿದೆ. ಕಟ್ಟಡದ ಅವಶೇಷಗಳಡಿ ಐವರು ಕಾರ್ಮಿಕರು ಸಿಲುಕಿರುವುದಾಗಿ ತಿಳಿದುಬಂದಿದೆ.
ಓದಿ: ಟಿಂಬರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ.. 11 ಜನರ ಸಜೀವ ದಹನ
ಸ್ಥಳದಲ್ಲಿದ್ದ ಇತರ ಕಾರ್ಮಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವು ನಿಮಿಷಗಳ ನಂತರ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ತಂಡವು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿತು. ಅವಶೇಷಗಳ ಅಡಿ ಸಿಲುಕಿದ್ದ ಐವರನ್ನು ಹೊರತೆಗೆಯಲಾಯಿತು. ಆದರೆ ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಎಂಎಂಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಎಲ್ಲಾ ಕಾರ್ಮಿಕರು ಬಿಹಾರ ನಿವಾಸಿಗಳು ಎಂದು ತಿಳಿದು ಬಂದಿದೆ.
ಪೊಲೀಸರು ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಂಡಿದೆ. ಆದರೆ, ನಿರ್ಮಾಣ ಹಂತದಲ್ಲಿರುವ ಚರಂಡಿ ಕಾಮಗಾರಿಯನ್ನು ಶೀಘ್ರವಾಗಿ ಮಾಡಲು ರಾತ್ರಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.