ಬಾಲಾಘಾಟ್ (ಮಧ್ಯಪ್ರದೇಶ): ದೇಶಾದ್ಯಂತ ಕೊರೊನಾ ಉಲ್ಬಣಗೊಂಡಿದ್ದು, ಮಧ್ಯಪ್ರದೇಶದ ಆಸ್ಪತ್ರೆಗಳು ಹಾಸಿಗೆ, ಆಕ್ಸಿಜನ್ ಕೊರೆತೆ ಎದುರಿಸುತ್ತಿವೆ. ಇದನ್ನು ಅರಿತ ನಕ್ಸಲ್ ಪೀಡಿತ ಬಾಲಾಘಾಟ್ ಜಿಲ್ಲೆಯ ಮೂರು ಗ್ರಾಮಗಳ ಜನರು ತಾವೇ ಆಸ್ಪತ್ರೆಯೊಂದನ್ನು ತೆರೆದಿದ್ದಾರೆ.
ಜಿಲ್ಲಾಡಳಿತದ ಅನುಮತಿ ಪಡೆದು ತಮ್ಮ ಪ್ರದೇಶದಲ್ಲಿದ್ದ ಹಾಸ್ಟೆಲ್ವೊಂದನ್ನು 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದಾರೆ. ಗ್ರಾಮದ ಪ್ರತಿ ಮನೆಯಿಂದಲೂ ಹಣ ಸಂಗ್ರಹಿಸಿ ಆಮ್ಲಜನಕ ಸಾಂದ್ರಕ ಸೇರಿದಂತೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಿದ್ದಾರೆ.
ಇವರ ಪರಿಶ್ರಮವನ್ನು ಗುರುತಿಸಿದ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತದವರು ಸಹಾಯಹಸ್ತ ಚಾಚಿದ್ದಾರೆ. ಸರ್ಕಾರಿ ವೈದ್ಯರನ್ನು ಇಲ್ಲಿಗೆ ಕಳುಹಿಸಿಕೊಡುತ್ತಿದ್ದು, ಇದೀಗ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಬಾಲಘಾಟ್ ಜಿಲ್ಲಾ ಕೇಂದ್ರದಿಂದ 26 ಕಿ.ಮೀ. ದೂರದಲ್ಲಿ ಈ ಆಸ್ಪತ್ರೆಯಿದ್ದು, 25 ಆಮ್ಲಜನಕ ಸಾಂದ್ರಕಗಳ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಿದ್ದಾರೆ.