ಭೋಪಾಲ್(ಮಧ್ಯಪ್ರದೇಶ): ಬಾರ್ಗಿ ಕಾಲುವೆ ಯೋಜನೆಗಾಗಿ ಸುರಂಗ ನಿರ್ಮಾಣದ ವೇಳೆ ಸುಮಾರು 9 ಕಾರ್ಮಿಕರು ಸುರಂಗದೊಳಗೆ ಸಿಲುಕಿದ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಸ್ಲೀಮನಾಬಾದ್‌ನಲ್ಲಿ ಪ್ರದೇಶದಲ್ಲಿ ನಡೆದಿದೆ.
ನೀರಾವರಿಗಾಗಿ ನರ್ಮದಾ ನದಿಗೆ ಬಾರ್ಗಿ ಕಾಲುವೆ ಯೋಜನೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ 9 ಮಂದಿ ಸುರಂಗದೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದರಲ್ಲಿ ಐವರನ್ನು ರಕ್ಷಣೆ ಮಾಡಲಾಗಿದೆ. ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಜಬಲ್ಪುರದಿಂದ ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ ಆಗಮಿಸಿದ್ದು, ತ್ವರಿತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಟ್ನಿ ಜಿಲ್ಲಾಧಿಕಾರಿ ಪ್ರಿಯಾಂಕ್ ತಿಳಿಸಿದರು.
ಮಧ್ಯಪ್ರದೇಶ ಸರ್ಕಾರದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ರಾಜೋರಾ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದು, ಸುರಂಗದೊಳಗೆ ಸಿಲುಕಿರುವ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅರಬ್ಬೀ ಸಮುದ್ರದ ಮೂಲಕ ಸಾಗಿಸುತ್ತಿದ್ದ 800 ಕೆಜಿ ಡ್ರಗ್ಸ್ ಎನ್ಸಿಬಿ ವಶ
ಅಗತ್ಯ ಉಪಕರಣಗಳೊಂದಿಗೆ ಎಸ್‌ಡಿಇಆರ್‌ಎಫ್ ತಂಡವು ಸ್ಥಳವನ್ನು ಅಗೆಯುವ ಮೂಲಕ ಕಾರ್ಮಿಕರನ್ನು ಹೊರತೆಗೆಯಲು ಮುಂದಾಗಿದೆ. ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಘಟನೆಯ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ಗಾಯಗೊಂಡ ಕಾರ್ಮಿಕರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಸಿಎಂ ಚೌಹಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.