ಸಾಗರ್ (ಮಧ್ಯಪ್ರದೇಶ): ಲಾರಿ ಮತ್ತು ಕಾರು ಮಧ್ಯೆ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಲಾರಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ.
ಇಲ್ಲಿನ ಸನೋಧಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗರ್-ಜಬಲ್‌ಪುರ ರಸ್ತೆಯ ಬಮೋರಿ ದೂದರ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಎಸ್‌ಯುವಿ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಇಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಒಪಿ) ಅಶೋಕ ಚೌರಾಸಿಯಾ ತಿಳಿಸಿದ್ದಾರೆ.
ತಕ್ಷಣಕ್ಕೆ ಎಲ್ಲ ಮೃತರ ಗುರುತು ಪತ್ತೆಯಾಗಿಲ್ಲ. ಆದರೆ, ಮೂವರ ಬಗ್ಗೆ ಮಾತ್ರ ಮಾಹಿತಿ ಲಭ್ಯವಾಗಿದ್ದು, ಅವರನ್ನು ಅರ್ಪಿತ್ ಜೈನ್, ಬ್ರಿಜೇಶ್ ಠಾಕೂರ್ ಮತ್ತು ಮುಕ್ಕು ರಾಂಕ್ವಾರ್ ಎಂದು ಗುರುತಿಸಲಾಗಿದೆ. ಅಪಘಾತಕ್ಕೀಡಾದ ಪಜೆರೋ ಕಾರು ಅಮರ್‌ದೀಪ್ ಟ್ರಾವೆಲ್ಸ್ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಸ್ಥಳಕ್ಕೆ ಭೇಟಿ ಮಾಹಿತಿ ಕಲೆ ಹಾಕಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅಮರನಾಥ ಯಾತ್ರೆ: ಮಾರ್ಗ ಮಧ್ಯೆ ಕಲ್ಲು ಬಂಡೆ ಉರುಳಿ ಮಹಿಳೆ ಸಾವು
ಮಹಿಳೆಯರ ಮೇಲೆ ಹರಿದ ಕಾರು: ಮತ್ತೊಂದೆಡೆ, ತಮಿಳುನಾಡಿನ ವಿಲ್ಲುಪ್ಪುರಂ ಜಿಲ್ಲೆಯಲ್ಲೂ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿನ ಜಂಕ್ಷನ್‌ನಲ್ಲಿ ನಿಂತಿದ್ದ ಜನರ ಗುಂಪಿನ ಮಧ್ಯೆ ಕಾರೊಂದು ನುಗ್ಗಿದ ಪರಿಣಾಮ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಇದಲ್ಲದೆ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೀಜುಪುತುಪಟ್ಟಿ ಸಮೀಪದ ಜಂಕ್ಷನ್‌ನಲ್ಲಿ ಇಂದು ಮುಂಜಾನೆ ಬಸ್ಗಾಗಿ ಮಹಿಳೆಯರ ಗುಂಪು ಕಾಯುತ್ತಿತ್ತು. ಈ ವೇಳೆ ಕಾರು ಪುದುಚೇರಿ ಕಡೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದು ಗುದ್ದಿಕೊಂಡು ಹೋಗಿದೆ. ಪರಿಣಾಮ ಈ ಗುಂಪಿನಲ್ಲಿ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಗಾಯಾಳುಗಳಿಗೂ ನಗದು ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಆಂಬ್ಯುಲೆನ್ಸ್‌ಗೆ ಟ್ರಕ್ ಡಿಕ್ಕಿ.. ಒಂದೇ ಕುಟುಂಬದ ಮೂವರು ಸಾವು