ನವದೆಹಲಿ : ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು, ಕರ್ನಾಟಕದ ಎರಡು ರೈಲ್ವೆ ಯೋಜನೆಗಳು ಸ್ಥಗಿತಗೊಂಡಿದ್ದನ್ನು ಪ್ರಸ್ತಾಪಿಸಿದ್ದಾರೆ.
ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡುಗು ಜಿಲ್ಲೆಗೆ ಈವರೆಗೂ ಒಂದೇ ಒಂದು ರೈಲ್ವೆ ಸಂಪರ್ಕ ಕಲ್ಪಿಸಲಾಗಿಲ್ಲ. ಇದಕ್ಕಾಗಿ 1819 ರಲ್ಲಿ ಮೈಸೂರು-ಕುಶಾಲನಗರ ಮಾರ್ಗದ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿತ್ತು.
ಆದರೆ, ಅದು ಈವರೆಗೂ ಕಾರ್ಯಾರಂಭಗೊಂಡಿಲ್ಲ. ಇದಕ್ಕೆ ಪರಿಸರ ಇಲಾಖೆ ಅನುಮತಿ ಇಲ್ಲದ ಕಾರಣ ರೈಲ್ವೆ ಯೋಜನೆ ನೆನಗುದಿಗೆ ಬಿದ್ದಿದೆ. ಇದನ್ನು ಕೇಂದ್ರ ಸರ್ಕಾರ ಪರಿಶೀಲಿಸಿ ರೈಲ್ವೆ ಯೋಜನೆಯನ್ನು ಪುನಾರಂಭ ಮಾಡಬೇಕು ಎಂದು ಕೋರಿದರು.
ಇದಲ್ಲದೇ,ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ಯೋಜನೆ ಕೂಡ ನೆನಗುದಿಗೆ ಬಿದ್ದಿದೆ. 1996-97ರಲ್ಲಿ ಹೆಚ್ ಡಿ ದೇವೇಗೌಡ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಈ ರೈಲು ಮಾರ್ಗ ಯೋಜನೆಗೆ ಅನುಮನೋದನೆ ನೀಡಿದ್ದರು. ಇದು ನಿಜವಾಗಿಯೂ ಬೆಂಗಳೂರಿನಿಂದ ಸತ್ಯಮಂಗಲದವರೆಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿತ್ತು.
ಆದರೆ, ಈ ಯೋಜನೆಗೂ ಪರಿಸರ ಇಲಾಖೆಯ ಅನುಮತಿ ಸಿಗದ ಕಾರಣ ಯೋಜನೆ ನೆನಗುದಿಗೆ ಬಿದ್ದಿದೆ. ಹೀಗಾಗಿ, ಕೇಂದ್ರ ಸರ್ಕಾರ ಈ ಬಗ್ಗೆ ಪರಾಮರ್ಶೆ ನಡೆಸಿ ಈ ಎರಡು ರೈಲ್ವೆ ಯೋಜನೆಗಳನ್ನು ಆರಂಭಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆಗೆ ಕೋರಿದ್ದಾರೆ. ಇದಕ್ಕೆ ಉತ್ತರಿಸಿದ ರೈಲ್ವೆ ಇಲಾಖೆ ಸಚಿವರು, ಈ ಬಗ್ಗೆ ಮಾಹಿತಿ ಪಡೆದು ಯೋಜನೆಗಳ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ಮಹಿಳಾ ಡಿಎಸ್‌ಪಿ ಮೇಲೆ ದೌರ್ಜನ್ಯ; ಇಬ್ಬರು ಕಾನ್ಸ್ಟೇಬಲ್ ಸೇರಿ 15 ಜನರ ವಿರುದ್ಧ ಎಫ್‌ಐಆರ್ ದಾಖಲು