ಭೋಪಾಲ್ (ಮಧ್ಯಪ್ರದೇಶ): ಪಂಚಾಯಿತಿಗಳಲ್ಲಿ ಮಹಿಳೆಯರು ಗೆದ್ದು ಬಂದರೂ ಅಧಿಕಾರವನ್ನು ಮಾತ್ರ ಗಂಡಂದಿರು ಇಲ್ಲವೇ ಬೇರೆ ಯಾರೋ ಚಲಾಯಿಸುವುದನ್ನು ಕೇಳಿದ್ದೇವೆ. ಆದರೆ, ಮಧ್ಯಪ್ರದೇಶದ ಸಾಗರ ಮತ್ತು ದಮೋಹಾ ಪ್ರದೇಶಗಳಲ್ಲಿ ಜನರಿಂದ ಆಯ್ಕೆಯಾದ ಮಹಿಳೆಯರ ಬದಲಿಗೆ ಪುರುಷರೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಎಲ್ಲರಿಗೂ ಸಮಾನತೆ ಮತ್ತು ಹಕ್ಕುಗಳನ್ನು ಪ್ರತಿಪಾದಿಸುವ ಪ್ರತಿಜ್ಞೆ ಮಾಡಿದ್ದಾರೆ!.
ಒಂದಲ್ಲ, ಎರಡಲ್ಲ.. ಏಳು ಜನರು: ಎರಡು ವಾರಗಳ ಹಿಂದೆ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ ಸಾಗರ ಜಿಲ್ಲೆಯ ಜೈಸಿನಗರ ಗ್ರಾಮದಲ್ಲಿ 21 ಸದಸ್ಯರು ನೂತನವಾಗಿ ಆಯ್ಕೆಯಾಗಿದ್ದರು. ಇದರಲ್ಲಿ 10 ಮಹಿಳೆಯರೂ ಸಹ ಸೇರಿದ್ದರು. ಆದರೆ, 10 ಮಹಿಳಾ ಸದಸ್ಯೆಯರಲ್ಲಿ ಕೇವಲ ಮೂವರು ಮಾತ್ರವೇ ತಮ್ಮ ಪ್ರಮಾಣ ವಚನವನ್ನು ತಾವೇ ಸ್ವೀಕರಿಸಿದ್ದಾರೆ. ಉಳಿದೆಲ್ಲ ಮಹಿಳಾ ಸದಸ್ಯೆಯರ ಪೈಕಿ ಪುರುಷರೇ ಪ್ರತಿಜ್ಞೆ ಸ್ವೀಕಾರ ಮಾಡಿದ್ಧಾರೆ. ಅಂದರೆ, ಮಹಿಳೆಯರ ಗಂಡಂದಿರು, ಮಾವಂದಿರು ಇಲ್ಲವೇ ತಂದೆ ಪಂಚಾಯಿತಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
ಕೆಲಸವಿದೆ ಬರಲ್ಲ ಅಂದ್ರಂತೆ: ಆಯ್ಕೆಯಾದ ಮಹಿಳೆಯರ ಬದಲಿಗೆ ಪುರುಷರು ಪ್ರಮಾಣವಚನ ಸ್ವೀಕರಿಸಿರುವ ಕಾರಣದ ಬಗ್ಗೆಯೂ ಅಧಿಕಾರಿಯೊಬ್ಬರು ಅಚ್ಚರಿಯ ಹೇಳಿಕೆ ಕೊಟ್ಟರು. "ಇದುವರೆಗೆ ಮೂವರು ಮಹಿಳೆಯರು ಮಾತ್ರವೇ ಬಂದು ಅಧಿಕಾರ ಸ್ವೀಕರಿಸಿದ್ದಾರೆ. ಉಳಿದ ಮಹಿಳಾ ಸದಸ್ಯೆಯರಿಗೂ ಅನೇಕ ಬಾರಿ ಜ್ಞಾಪನೆ ಪತ್ರಗಳನ್ನು ಕಳುಹಿಸಲಾಗಿತ್ತು. ಆದರೆ, ಅವರು ನಮಗೆ ಮನೆಯಲ್ಲಿ ಅಗತ್ಯ ಕೆಲಸಗಳಿವೆ, ಬರಲು ಆಗುವುದಿಲ್ಲ ಎಂದು ಹೇಳಿದ್ದರು. ಹೀಗಾಗಿಯೇ ಗಂಡಂದಿರು, ಇಲ್ಲವೇ ಸಂಬಂಧಿಕರು ಬಂದು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸುವಂತೆ ಸೂಚಿಸಲಾಗಿತ್ತು" ಎಂದರು.
ಇದನ್ನೂ ಓದಿ: ರಾಮಾಯಣ ಕ್ವಿಜ್ನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಟಾಪರ್