ನವ ದೆಹಲಿ: ಸಂಚಾರ ದಟ್ಟಣೆ ನಮ್ಮ ದೇಶದ ಪ್ರಮುಖ ಸಮಸ್ಯೆಗಳಲ್ಲಿ ಒಂದು. ರಸ್ತೆಯ ಬದಿಯಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡುವುದು, ಮುರಿದ ಫುಟ್ಪಾತ್ಗಳು, ಇಕ್ಕಟ್ಟಾದ ರಸ್ತೆಗಳಿಂದಾಗಿ ಪ್ರತಿದಿನ ಸವಾರರು ಈ ಟ್ರಾಫಿಕ್ ಜಾಮ್ ಅನ್ನೋ ಕಿರಿಕಿರಿಯಲ್ಲಿ ಸಿಲುಕಿಕೊಳ್ಳಲೇಬೇಕು. ಅದರಲ್ಲೂ ಬೆಂಗಳೂರು ಮತ್ತು ಮುಂಬೈ ನಗರಗಳು ಕಳಪೆ ರಸ್ತೆ ನಿರ್ವಹಣೆಯಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಕುಖ್ಯಾತಿ ಪಡೆದಿವೆ.
ಆದರೆ ಇದರ ನಡುವೆ ಭಾರತದ ನಗರವೊಂದು ಅಚ್ಚುಕಟ್ಟಾಗಿ ಟ್ರಾಫಿಕ್ ನಿಭಾಯಿಸಿರುವ ಕಾರಣಕ್ಕೆ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಪ್ರಶಂಸೆ ಗಳಿಸುತ್ತಿದೆ. ಈಶಾನ್ಯ ರಾಜ್ಯ ಮಿಜೋರಾಂನ ಐಜ್ವಾಲ್ನ ನಗರದ ವಾಹನ ಸವಾರರು ಶಿಸ್ತಿನಿಂದ ಟ್ರಾಫಿಕ್ ಸಮಸ್ಯೆ ಬಾರದಂತೆ ವಾಹನ ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.
ಎಲಿಜಬೆತ್ ಎನ್ನುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಿಜೋರಾಂನ ರಾಜಧಾನಿ ಐಜ್ವಾಲ್ನ ಸಿಟಿಯ ಟ್ರಾಪಿಕ್ನ ವಿಡಿಯೋ ಹಂಚಿಕೊಂಡಿದ್ದು, 'ಭಾರತದ ಏಕೈಕ ಸೈಲೆಂಟ್ ಸಿಟಿ' ಎಂದು ಟೈಟಲ್ ನೀಡಿದ್ದಾರೆ. ಭಾರತದಲ್ಲಿ ಅಚ್ಚರಿಯೋ ಎಂಬಂತೆ, ವಿಡಿಯೋದಲ್ಲಿ ರಸ್ತೆಯ ಬಲಭಾಗಕ್ಕೆ ಕಾರುಗಳು ಸಾಲಾಗಿ ನಿಂತಿವೆ. ಅದೇ ರಸ್ತೆಯ ಇನ್ನೊಂದು ಪಕ್ಕದಲ್ಲಿ ಕಾರುಗಳು ಯಾವುದೇ ಹಾರ್ನ್ ಹಾಕದೇ ತಮ್ಮ ಮುಂದಿನ ಕಾರುಗಳನ್ನು ಓವರ್ಟೇಕ್ ಮಾಡದೇ ತಾಳ್ಮೆಯಿಂದ ಸಾಲಾಗಿ ಸಾಗುತ್ತಿವೆ.
ಪ್ರತ್ಯೇಕವಾಗಿ ಯಾವುದೇ ಲೇನ್ ಗುರುತಿಸದೇ ಇದ್ದರೂ ಇನ್ನೊಂದು ಪಕ್ಕದಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮದೇ ಲೇನ್ ನಿರ್ಮಿಸಿಕೊಂಡು ಸಾಗುತ್ತಿದ್ದಾರೆ. ಬಹುತೇಕ ಸವಾರರು ಹೆಲ್ಮೆಟ್ಧಾರಿಗಳಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ರೀತಿ ಶಿಸ್ತಿನಿಂದ ಟ್ರಾಫಿಕ್ ಜಾಮ್ ಆಗದ ರೀತಿ ವಾಹನಗಳು ಸಾಗುತ್ತಿರುವುದನ್ನು ನೋಡಿದ ಅನೇಕರು ಆಶ್ಚರ್ಯಗೊಂಡಿದ್ದು, ಸವಾರರ ಶಿಸ್ತಿಗೆ ಶಹಬಾಸ್ಗಿರಿ ನೀಡಿದ್ದಾರೆ. ನವೆಂಬರ್ 24 ರಂದು ಹಂಚಿಕೊಂಡ ವಿಡಿಯೋ ಐದು ಮಿಲಿಯನ್ ವೀಕ್ಷಣೆ ಕಂಡಿದ್ದು, ಎರಡು ಲಕ್ಷ ಲೈಕ್ ಗಿಟ್ಟಿಸಿಕೊಂಡಿದೆ.
- " class="align-text-top noRightClick twitterSection" data="
">
ವಿಡಿಯೋ ಹಂಚಿಕೊಂಡಿರುವ ಎಲಿಜಬೆತ್, 'ನೀವು ಭಾರತದ ಯಾವುದೇ ನಗರಗಳಲ್ಲಿ ವಾಸಿಸುತ್ತಿದ್ದರೂ ನಿಮಗೆ ಭಾರತದಲ್ಲಿ ಟ್ರಾಫಿಕ್ ಜಾಮ್ ಎನ್ನುವುದು ಎಷ್ಟು ತೀವ್ರವಾಗಿರುತ್ತದೆ ಎನ್ನುವುದು ತಿಳಿದಿರಬಹುದು. ರಸ್ತೆಯಲ್ಲಿ ಯಾವುದೇ ಸ್ಥಳಾವಕಾಶವಿಲ್ಲದಿದ್ದರೂ ಪ್ರತಿಯೊಬ್ಬ ವಾಹನ ಸವಾರರೂ ತಾವು ಹೋಗುವ ದಾರಿಯನ್ನು ಸುಗಮವಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಾವು ಯಾವುದೇ ಹಾರ್ನ್ ಮಾಡದೆ ಕಾಯುವುದು ಮಾತ್ರ ನಮಗಿರುವ ದಾರಿ ಎಂಬುದು ತಿಳಿದಿದ್ದರೂ ವಿನಾಕಾರಣ ಹಾರ್ನ್ ಶಬ್ದ ಮಾಡುತ್ತಲೇ ಇರುತ್ತಾರೆ. (ನನ್ನನ್ನು ತಪ್ಪಾಗಿ ತಿಳಿಯಬೇಡಿ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಆದರೆ ನಾವು ಇದನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಇದಕ್ಕೆ ನಾವೇ ನಾಂದಿ ಹಾಡಬೇಕಿದೆ). ಆದರೆ ಐಜ್ವಾಲ್ನಲ್ಲಿ ಪ್ರತಿಯೊಬ್ಬರೂ ತಾಳ್ಮೆಯಿಂದ ತಮ್ಮ ಸರದಿಗಾಗಿ ಯಾವುದೇ ಹಾರ್ನ್ ಮಾಡದೆ ಕಾಯುತ್ತಿದ್ದಾರೆ. ನಿಜವಾಗಿಯೂ ಇದನ್ನು ಭಾರತದ ಪ್ರತಿಯೊಂದು ನಗರಗಳಲ್ಲಿ ಅಳವಡಿಸಿಕೊಳ್ಳಬೇಕು' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಒಬ್ಬ ಬಳಕೆದಾರ, 'ಮುಂದಿನ ಬಾರಿ ಯಾರಾದರೂ ಭಾರತದಲ್ಲಿ ಟ್ರಾಫಿಕ್ ಜಾಮ್ ಕೆಟ್ಟದಾಗಿರುತ್ತದೆ ಎಂದು ಹೇಳಿದರೆ, ನಾವು ಆತ್ಮವಿಶ್ವಾಸದಿಂದ ಇಲ್ಲ ಎಂದು ಹೇಳಬಹುದು. ಅದಕ್ಕೆ ನಾವು ಐಜ್ವಾಲ್ ಜನರಿಗೆ ಧನ್ಯವಾದ ಹೇಳಬೇಕು' ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರ 'ಈಶಾನ್ಯ ಭಾರತದ ಜನರು ಅತ್ಯಂತ ಶಿಷ್ಟಾಚಾರ ಹೊಂದಿದ್ದಾರೆ. ನಾನು ಅಲ್ಲಿಗೆ ಭೇಟಿ ನೀಡಿರುವ ಕಾರಣ ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅಲ್ಲಿ ಪೊಲೀಸರು ಕೂಡ ಪೊಲೀಸರಂತೆ ಕೆಲಸ ಮಾಡುತ್ತಾರೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ಜಾಮ್ಗೆ ಕಡಿವಾಣ ಹಾಕಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ