ಬಗಾಹಾ(ಬಿಹಾರ): ತಾಯಿಯೊಬ್ಬರು ತನ್ನ ಮಗನನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡಿದ ಘಟನೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದ ಲೌಕರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ವಾ ಬಾರಿ ಗ್ರಾಮದಲ್ಲಿ ನಡೆದಿದೆ. ನದಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ಬಾಲಕ ಮೊಸಳೆ ಮೇಲೆ ಕಾಲಿಟ್ಟಿದ್ದಾನೆ. ಈ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿದೆ. ಇದನ್ನು ನೋಡಿದ ತಾಯಿ ಮೊಸಳೆಯೊಂದಿಗೆ ಕಾದಾಡಿ ನಂತರ ಸಾವಿನ ಕಪಿಮುಷ್ಠಿಯಿಂದ ತನ್ನ ಮಗನನ್ನು ಕಾಪಾಡಿದ್ದಾರೆ. ಮೊಸಳೆ ದಾಳಿಯಿಂದ ಬಾಲಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕನ ಮೇಲೆ ದಾಳಿ ಮಾಡಿದ ಮೊಸಳೆ: ಗಂಡಕ್ ನದಿಯಲ್ಲಿ ನೂರಾರು ಮೊಸಳೆಗಳಿವೆ. ಈ ಮೊಸಳೆಗಳು ಮಳೆಗಾಲದಲ್ಲಿ ಗಂಡಕ್ ನದಿಯ ಉಪನದಿಗಳನ್ನೂ ತಲುಪುತ್ತವೆ. ಆಗ ಸಾಮಾನ್ಯ ಜನರಿಗೆ ಅಪಾಯವನ್ನು ಉಂಟುಮಾಡುತ್ತವೆ. ಲೌಕರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಸುರ್ವಾ ಬರಿ ಗ್ರಾಮದ ಮೂಲಕ ಹಾದುಹೋಗುವ ತ್ರಿವೇಣಿ ಕಾಲುವೆಯನ್ನು ದಾಟುತ್ತಿದ್ದಾಗ 11 ವರ್ಷದ ನಿತೀಶ್ ಕುಮಾರ್ ಮೊಸಳೆ ಮೇಲೆ ಕಾಲಿಟ್ಟಿದ್ದಾನೆ. ಈ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿದೆ.
ಮೊಸಳೆ ಬಾಯಿಯಿಂದ ಮಗನನ್ನು ರಕ್ಷಿಸಿದ ತಾಯಿ: ಮೊಸಳೆ ದಾಳಿ ವೇಳೆ ಬಾಲಕನ ಜೊತೆ ತಾಯಿಯೂ ಇದ್ದರು. ಮೊಸಳೆಯ ಹಿಡಿತದಲ್ಲಿ ತನ್ನ ಮಗನನ್ನು ಕಂಡ ತಾಯಿ ತಕ್ಷಣವೇ ತನ್ನ ಪ್ರಾಣವನ್ನು ಲೆಕ್ಕಿಸದೆ ಮಗನ ಸಹಾಯಕ್ಕೆ ದೌಡಾಯಿಸಿದ್ದಾರೆ. ಬಳಿಕ ಮೊಸಳೆಯೊಂದಿಗೆ ಹೋರಾಡಿ ಆ ತಾಯಿ ದೊಣ್ಣೆಯಿಂದ ಹೊಡೆಯಲು ಪ್ರಾರಂಭಿಸಿದ್ದರು. ಆಗ ಮೊಸಳೆ ಬಾಲಕನನ್ನು ಬಿಟ್ಟು ತೆರಳಿತು. ಈ ಮೂಲಕ ತಾಯಿ ಶೌರ್ಯ ತೋರಿ ತನ್ನ ಮಗನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಮೊಸಳೆಯಿಂದ ಪಾರಾದ ಬಳಿಕ ಆಸ್ಪತ್ರೆ ತಲುಪಿದ ತಾಯಿ: ಘಟನೆ ನಡೆದ ತಕ್ಷಣ ಮಹಿಳೆ ತನ್ನ ಮಗನೊಂದಿಗೆ ಹರ್ನಾಟಂಡ್ ಆರೋಗ್ಯ ಕೇಂದ್ರವನ್ನು ತಲುಪಿದರು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಉಪವಿಭಾಗೀಯ ಆಸ್ಪತ್ರೆಗೆ ಕಳುಹಿಸಲಾಯಿತು. ಇಲ್ಲಿ ವೈದ್ಯ ತಾರಿಕ್ ನದೀಮ್ ಬಾಲಕನಿಗೆ ಚಿಕಿತ್ಸೆ ನೀಡಿದ್ದು, ಬಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಹೊಲಕ್ಕೆ ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ತಾಯಿಯ ಶೌರ್ಯ: ಕಾಲುವೆ ದಾಟುತ್ತಿದ್ದಾಗ ಏಕಾಏಕಿ ನನ್ನ ಮಗ ಮೊಸಳೆಯ ಮೇಲೆ ಕಾಲಿಟ್ಟಿದ್ದಾನೆ. ನಂತರ ಮೊಸಳೆ ಆತನ ಮೇಲೆ ದಾಳಿ ಮಾಡಿ ಕೈಯನ್ನು ಹಿಡಿದಿತ್ತು. ನಂತರ ನಾನು ಪಕ್ಕದಲ್ಲಿ ಬಿದ್ದಿದ್ದ ಕೋಲಿನಿಂದ ಮೊಸಳೆ ಮೇಲೆ ದಾಳಿ ಮಾಡಿದೆ. ಆಗ ಮೊಸಳೆ ನನ್ನ ಮಗನನ್ನು ಬಿಟ್ಟು ನೀರಿನೊಳಗೆ ತೆರಳಿತು ಎಂದು ತಾಯಿ ಹೇಳಿದ್ದಾರೆ. ಸದ್ಯ ಆಸ್ಪತ್ರೆಯಲ್ಲೂ ಮಹಿಳೆಯ ಶೌರ್ಯದ ಬಗ್ಗೆ ಮೆಚ್ಚುಗೆ ಕೇಳಿ ಬರುತ್ತಿದ್ದು, ಮಗನ ಪ್ರಾಣ ಉಳಿಸಲು ತನ್ನ ಪ್ರಾಣದ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ ಎಂದು ಎಲ್ಲರೂ ಅಮ್ಮನನ್ನು ಕೊಂಡಾಡುತ್ತಿದ್ದಾರೆ.