ನವದೆಹಲಿ: ಗಂಡು ಮಗು ಹುಟ್ಟಲಿಲ್ಲ ಎಂಬ ಕಾರಣಕ್ಕಾಗಿ ಆಕ್ರೋಶಗೊಂಡ ತಾಯಿಯೋರ್ವಳು ತನ್ನ ಎರಡು ತಿಂಗಳ ಹೆಣ್ಣು ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದು, ತದನಂತರ ಒಲೆಯಲ್ಲಿ ಹಾಕಿ ಬೇಯಿಸಿದ್ದಾಳೆ. ಈ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ನಡೆದಿದೆ.
ಮಗು ನಾಪತ್ತೆಯಾಗಿದೆ ಎಂಬ ವಿಷಯ ಮೊದಲು ಹಬ್ಬಿದೆ. ಆದರೆ, ಮಗುವಿನ ಕೊಲೆ ಮಾಡಿದ್ದ ತಾಯಿ ಕೆಲ ದಿನಗಳಿಂದ ಹೊರಗಡೆ ಬಾರದೆ ಮನೆಯಲ್ಲೇ ಉಳಿದುಕೊಂಡಿದ್ದಳು. ಇದರ ಜೊತೆಗೆ ಮನೆಗೆ ಬೀಗ ಹಾಕಿದ್ದಳು. ಅಕ್ಕಪಕ್ಕದವರು ಬಾಗಿಲು ತೆರೆಯಲು ಯತ್ನಿಸಿ, ವಿಫಲರಾಗಿದ್ದರು. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೋಯ್ಡಾದಲ್ಲಿ ದೇಗುಲಕ್ಕೆ ನುಗ್ಗಿ ಶಿವಲಿಂಗ ವಿರೂಪ: ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸಿದಾಗ ಕೂಡ ಸತ್ಯಾಂಶ ಹೊರ ಬಂದಿಲ್ಲ. ಬಾಲಕಿಯನ್ನು ಮನೆಯಲ್ಲಿರುವ ನೀರಿನ ತೊಟ್ಟೆಯಲ್ಲಿ ಎಸೆದಿರುವ ಶಂಕೆ ವ್ಯಕ್ತಪಡಿಸಿ, ಅದರಲ್ಲೂ ಹುಡುಕಾಟ ನಡೆಸಲಾಗಿತ್ತು. ಕೊನೆಯದಾಗಿ ಅಡುಗೆ ಮನೆಯಲ್ಲಿ ಶೋಧಕಾರ್ಯ ನಡೆಸಿದಾಗ ಮಗುವಿನ ಶವ ಒಲೆಯಲ್ಲಿ ಸಿಕ್ಕಿದೆ. ಪ್ರಕರಣದ ಬೆನ್ನಲ್ಲೇ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಗಂಡು ಮಗುವಾಗಿದ್ರೆ ದುಡಿದು ಹಾಕುತ್ತಿದ್ದನೆಂಬ ಕಾರಣದಿಂದ ಹೆಣ್ಣು ಮಗುವಿನ ಕೊಲೆ ಮಾಡಿರುವುದಾಗಿ ಪಾಪಿ ತಾಯಿ ಹೇಳಿಕೆ ನೀಡಿದ್ದಾಳೆ.