ವಿಜಯನಗರಂ(ಆಂಧ್ರಪ್ರದೇಶ): ಮಗಳನ್ನು ಹೀರೋಯಿನ್ ಮಾಡಬೇಕೆಂದುಕೊಂಡಿದ್ದ ತಾಯಿಯೋರ್ವಳು ಅಡ್ಡದಾರಿ ಹಿಡಿದಿದ್ದಾಳೆ. ತನ್ನ ಅಪ್ರಾಪ್ತ ವಯಸ್ಸಿನ ಪುತ್ರಿ ದೈಹಿಕವಾಗಿ ಬೇಗ ಬೆಳೆಯಲಿ ಎಂದು ಡ್ರಗ್ಸ್ ನೀಡಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ. ಚಲನಚಿತ್ರೋದ್ಯಮದ ಬಗ್ಗೆ ಗೀಳು ಹೊಂದಿದ್ದ ತಾಯಿಯು ತನ್ನ ಮಗಳನ್ನು ಚಿತ್ರ ನಟಿಯನ್ನಾಗಿ ಮಾಡಲು ಬಯಸಿದ್ದಳು. ಅಪ್ರಾಪ್ತೆ ಮಗಳು ಬೇಗ ದೈಹಿಕವಾಗಿ ಬೆಳವಣಿಗೆಯಾಗುವಂತೆ ಮಾಡಲು ಡ್ರಗ್ಸ್ ಇಂಜೆಕ್ಷನ್ ನೀಡಲು ಪ್ರಾರಂಭಿಸಿದ್ದಾಳೆ. ಈ ಹಿಂಸೆಯನ್ನು ಸಹಿಸಲಾರದೆ ಸಂತ್ರಸ್ತೆ ಚೈಲ್ಡ್ ಲೈನ್ ಇಲಾಖೆಗೆ ದೂರು ನೀಡಿದಾಗ ಈ ಕೃತ್ಯ ಬಯಲಿಗೆ ಬಂದಿದೆ.
ಏನಿದು ಘಟನೆ?: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿಜಯನಗರಂನ ಗ್ರಾಮವೊಂದರಲ್ಲಿ ವಿವಾಹಿತ ಮಹಿಳೆ (40) ವಾಸವಾಗಿದ್ದರು. ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಪತಿ ನಿಧನರಾಗಿದ್ದರು. ಹೀಗಾಗಿ ಮಹಿಳೆ ಬೇರೊಬ್ಬ ವ್ಯಕ್ತಿ ಜೊತೆಗೆ ಮತ್ತೊಂದು ಮದುವೆಯಾಗಿದ್ದಳು. ಎರಡನೇ ಪತಿಯಿಂದ ಮಹಿಳೆಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ ಎರಡನೇ ಪತಿ, ಪತ್ನಿಯ ನಡವಳಿಕೆಯನ್ನು ಇಷ್ಟಪಡದೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಸದ್ಯ ಮಹಿಳೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಹಜೀವನವನ್ನು ನಡೆಸುತ್ತಿದ್ದಾಳೆ.
ಮಹಿಳೆಯ ಮೊದಲ ಗಂಡನ ಮಗಳು (15) ಇತ್ತೀಚೆಗೆ ವಿಶಾಖಪಟ್ಟಣಂನ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿ. ಬೇಸಿಗೆ ರಜೆಗೆಂದು ತನ್ನ ತಾಯಿಯ ಬಳಿಗೆ ಬಂದಿದ್ದಳು. ಆದರೆ ಆಗಾಗ ಮಹಿಳೆಯ ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಬಾಲಕಿಯನ್ನು ನೋಡಿ ಮಹಿಳೆಗೆ ನಿನ್ನ ಮಗಳಿಗೆ ಸಿನಿಮಾ ನಟಿಯಾಗುವ ಲಕ್ಷಣಗಳಿವೆ ಎಂದು ಹೇಳಿದ್ದರು. ಆದರೆ ಬಾಲಕಿ ಚಿಕ್ಕವಳಾಗಿರುವುದರಿಂದ ಅಂಗಾಂಗಗಳು ಬೇಗ ಬೆಳೆಯುವಂತೆ ಮಾಡಲು ಡ್ರಗ್ಸ್ ಇಂಜೆಕ್ಷನ್ ನೀಡಲು ಸಲಹೆ ನೀಡಿದ್ದರಂತೆ.
ನಂತರ ಮಹಿಳೆ ತನ್ನ ಅಪ್ರಾಪ್ತ ಮಗಳಿಗೆ ಡ್ರಗ್ಸ್ ಇಂಜೆಕ್ಷನ್ ನೀಡಲಾರಂಭಿಸಿದ್ದಾಳೆ. ಇದರ ಜೊತೆಗೆ ಹುಡುಗಿಯನ್ನು ವೇಶ್ಯಾವಾಟಿಕೆ ದಂಧೆಗೆ ಕರೆತರಲು ಬಯಸಿದ್ದಾಳೆ. ಒಬ್ಬರ ಬಳಿ ಹೋದರೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ಮಗಳಿಗೆ ಆಮಿಷ ಒಡ್ಡುತ್ತಿದ್ದಳು. ಆದರೆ ಇದಕ್ಕೆ ಬಾಲಕಿ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಮಗಳಿಗೆ ಚಿತ್ರಹಿಂಸೆ ನೀಡ ತೊಡಗಿದ್ದಾಳೆ. ಬಾಲಕಿಯನ್ನು ತನ್ನ ದಾರಿಗೆ ತರಲು ಹಲವು ಬಾರಿ ನಿದ್ದೆ ಮಾತ್ರೆಗಳನ್ನೂ ನೀಡಿದ್ದಾಳೆ.
ಬಾಲಕಿ ನೋವು ತಾಳಲಾರದೆ ಪರಿಪರಿಯಾಗಿ ತಾಯಿಯನ್ನು ಬೇಡಿಕೊಂಡರು ಆಕೆ ಇದನ್ನು ನಿಲ್ಲಿಸಲಿಲ್ಲ. ಈ ವೇಳೆ ಬಾಲಕಿ ಅಸ್ವಸ್ಥಳಾಗಿದ್ದಾಳೆ. ಚಿತ್ರಹಿಂಸೆ ತಾಳಲಾರದೆ ಬಾಲಕಿ ಗುರುವಾರ ರಾತ್ರಿ ಯಾರದೋ ಸಹಾಯದಿಂದ ಚೈಲ್ಡ್‌ಲೈನ್ 1098ಕ್ಕೆ ಕರೆ ಮಾಡಿದ್ದಾಳೆ. ಚೈಲ್ಡ್‌ಲೈನ್ ಸಿಬ್ಬಂದಿಗೆ ತನ್ನ ತನ್ನ ಸ್ಥಿತಿಯ ಬಗ್ಗೆ ವಿವರಿಸಿದ್ದಾಳೆ. ನಂತರ ಸಿಬ್ಬಂದಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸಹಾಯದಿಂದ ಅಲ್ಲಿಗೆ ತೆರಳಿದ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ.
ನಂತರ ಸಂತ್ರಸ್ತ ಬಾಲಕಿಯನ್ನು ವಿಶಾಖಪಟ್ಟಣಂನಲ್ಲಿರುವ ಸ್ವಧಾರ್ ಹೋಮ್‌ಗೆ ಕಳುಹಿಸಲಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಅಧ್ಯಕ್ಷ ಕೇಸಲಿ ಅಪ್ಪಾರಾವ್ ಮಾತನಾಡಿ, ಈ ಹೇಯ ಘಟನೆಯ ಬಗ್ಗೆ ಪ್ರಕರಣ ದಾಖಲಿಸುವಂತೆ ದಿಶಾ ಪೊಲೀಸರಿಗೆ ಸೂಚಿಸಲಾಗಿದೆ. ಎಲ್ಲಿಯಾದರೂ ಮಕ್ಕಳಿಗೆ ಈ ರೀತಿ ತೊಂದರೆಯಾದರೆ ಚೈಲ್ಡ್ಲೈನ್ಗೆ ಸಂಪರ್ಕಿಸುವಂತೆ ತಿಳಿಸಿದರು.
ಇದನ್ನೂ ಓದಿ:ಪ್ರೀತಿ ನಿರಾಕರಿಸಿದ ಯುವತಿಯ ಕತ್ತು ಸೀಳಿ, ತಾನೂ ಆತ್ಮಹತ್ಯೆಗೆ ಶರಣಾದ ಪಾಗಲ್ಪ್ರೇಮಿ!