ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಅಮುಲ್ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಿ ಘೋಷಣೆ ಹೊರಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಮದರ್ ಡೈರಿ ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿ ಆದೇಶ ಹೊರಹಾಕಿದೆ.
ಪ್ರಮುಖವಾಗಿ ದೆಹಲಿ-ಎನ್ಸಿಆರ್ ಹಾಗೂ ಇತರೆ ನಗರಗಳಲ್ಲಿ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲಾಗಿದ್ದು, ಪ್ರತಿ ಲೀಟರ್ಗೆ 2ರೂ ಏರಿಕೆಯಾಗಲಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೊಳ್ಳಲಿದೆ.
ಇದನ್ನೂ ಓದಿರಿ: Amul milk price hike: ದೇಶದೆಲ್ಲೆಡೆ ನಾಳೆಯಿಂದ ಹೊಸ ಬೆಲೆ ಜಾರಿ
ಮದರ್ ಡೈರಿ ಈ ಹಿಂದೆ 2019ರ ಡಿಸೆಂಬರ್ ತಿಂಗಳಲ್ಲಿ ಬೆಲೆ ಏರಿಕೆ ಮಾಡಿತ್ತು ಎಂದು ಕಂಪನಿ ಹೇಳಿಕೊಂಡಿದೆ. ಕಳೆದ ಒಂದು ವರ್ಷದಿಂದ ಹಾಲು ಖರೀದಿಯಲ್ಲಿ ಶೇ 8ರಿಂದ 10ರಷ್ಟು ಏರಿಕೆಯಾಗಿದ್ದು, ಇದರ ಜತೆಗೆ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಉತ್ತರ ಪ್ರದೇಶ, ಮುಂಬೈ, ನಾಗ್ಪುರ್ ಮತ್ತು ಕೋಲ್ಕತ್ತಾ ಸೇರಿದಂತೆ 11 ನಗರಗಳಲ್ಲಿ ಈ ಪರಿಷ್ಕೃತ ದರ ಜಾರಿಗೊಳ್ಳಲಿದೆ. ದೇಶದ 100 ನಗರಗಳಲ್ಲಿ ಮದರ್ ಡೈರಿ ಹಾಲು ಲಭ್ಯವಾಗುತ್ತಿದ್ದು, ಪ್ರತಿದಿನ ದೆಹಲಿ-ಎನ್ಸಿಆರ್ನಲ್ಲಿ 30 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದೆ. ದೇಶದಲ್ಲಿ ಪ್ರತಿ ಲೀಟರ್ ಮದರ್ ಡೈರಿ ಹಾಲಿನ ಬೆಲೆ 42 ರೂ. ಆಗಿದ್ದು, ಇದೀಗ 44 ರೂ. ಆಗಲಿದೆ.