ಸಂಗಾರೆಡ್ಡಿ: ತಾಯಿಯೊಬ್ಬಳು ಮುದ್ದಾದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ನ್ಯಾಲ್ಕಲ್ ತಾಲೂಕಿನ ರತ್ನಾಪೂರ್ ಗ್ರಾಮದಲ್ಲಿ ನಡೆದಿದೆ.
ವಿವರ:
ರತ್ನಾಪೂರ್ ನಿವಾಸಿ ನಾಗಪ್ಪ (36) ಎಂಬಾತ ತನ್ನ ಪತ್ನಿ ರುಕ್ಮಿಣಿ (29) ಮತ್ತು ಮಕ್ಕಳಾದ ಅಮ್ಮುಲು (6), ಭವಾನಿ (3) ಜೊತೆ ಹೈದರಾಬಾದ್ನಲ್ಲಿ ಜೀವನ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ನಾಗಪ್ಪ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದ. ಸ್ವಗ್ರಾಮದಲ್ಲಿ ನಾಗಪ್ಪನ ಅಂತ್ಯಕ್ರಿಯೆ ವಿಧಿವಿಧಾನಗಳ ಮೂಲಕ ನಡೆದಿತ್ತು.
ಬಳಿಕ ಗಂಡನ ಅಗಲಿಕೆಯ ನೋವಿನಿಂದ ಹೊರಬರದೆ ರತ್ನಾಪುರದಲ್ಲಿ ರುಕ್ಮಿಣಿ ಕಾಲ ಕಳೆಯುತ್ತಿದ್ದರು. ಏಕಾಏಕಿ ಶನಿವಾರ ರುಕ್ಮಿಣಿ ಮಕ್ಕಳೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಚಿನಿಗೆಪಲ್ಲಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೆರೆಯಲ್ಲಿ ತೇಲುತ್ತಿದ್ದ ಮೃತದೇಹಗಳನ್ನು ನೋಡಿದ ಗ್ರಾಮಸ್ಥರು, ಅವುಗಳನ್ನು ಹೊರತೆಗೆದು ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಾಲ್ಕ ವರ್ಷಗಳ ಹಿಂದೆ ರುಕ್ಮಿಣಿ ನಾಗಪ್ಪ ದಂಪತಿಯ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದ.
ತಾಯಿ ಮತ್ತು ಮಕ್ಕಳ ಆತ್ಮಹತ್ಯೆಯ ಯಾವುದೇ ದೂರು ನಮಗೆ ಬಂದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಮೃತರ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಿದ್ದಾರೆಂದು ಹದ್ನೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.