ಪುಣೆ(ಮಹಾರಾಷ್ಟ್ರ): ಗಂಡ ತೊರೆದಿದ್ದಕ್ಕೆ 2 ನೇ ಮದುವೆಯಾದ ಮಹಿಳೆ, ಬಳಿಕ ಆಕೆಯ ಅಪ್ರಾಪ್ತ ಮಗಳನ್ನೇ ಎರಡನೇ ಗಂಡನಿಗೆ (ಮಲತಂದೆ) ವಿವಾಹ ಮಾಡಿಸಿದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಭಾರತೀಯ ಸೇನೆಯಲ್ಲಿ ಜವಾನನಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ತಾಯಿ ವಿರುದ್ಧವೂ ಕೇಸ್ ಜಡಿಯಲಾಗಿದೆ.
ಸಾಗರ್ ಜೈರಾಮ್ ದತ್ಖಿಲೆ (28) ಬಂಧಿತ ಆರೋಪಿ. ಸೇನೆಯಲ್ಲಿ ಈತ ಸೇವೆ ಸಲ್ಲಿಸುತ್ತಿದ್ದಾನೆ. ಮೊದಲ ಪತಿ ಮಹಿಳೆಯನ್ನು ತೊರೆದ ಕಾರಣ ಸಾಗರ್ ಆಕೆಯನ್ನು ವಿವಾಹವಾಗಿದ್ದ. 15 ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ಈತನಿಗೆ ಮಹಿಳೆಯೇ, ತನ್ನ ಮಗಳನ್ನು ವಿವಾಹವಾಗುವಂತೆ ಕೇಳಿಕೊಂಡಿದ್ದಾಳೆ.
ಅದರಂತೆ ಅಪ್ರಾಪ್ತ ಮಗಳನ್ನು ಮಲತಂದೆಯ ಜೊತೆಗೆ ಮದುವೆಯಾಗಲು ಕೇಳಿದ್ದಾಳೆ. ಇದನ್ನು ಮಗಳು ಆಕ್ಷೇಪಿಸಿದ್ದಾಳೆ. ಕುಪಿತಳಾದ ತಾಯಿ ತಾನು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಹಾಕಿದ್ದಾಳೆ. ಬಳಿಕ ಬಾರ್ಶಿ ಎಂಬಲ್ಲಿ ನವೆಂಬರ್ 6 ರಂದು ಬಲವಂತವಾಗಿ ಅಪ್ರಾಪ್ತೆಯನ್ನು ಮಲತಂದೆ ಜೊತೆಗೆ ವಿವಾಹ ಮಾಡಿಸಲಾಗಿದೆ.
ಬಳಿಕ ಮಲತಂದೆ ಜೊತೆಗೆ ದೈಹಿಕ ಸಂಬಂಧ ಹೊಂದಲು ಮಗಳಿಗೆ ತಾಯಿಯೇ ಒತ್ತಾಯಿಸಿದ್ದಾಳೆ. ಇದರಿಂದ ಭಯಗೊಂಡ ಅಪ್ರಾಪ್ತೆ ಶಾಲೆಯಲ್ಲಿ ಅಳುತ್ತಾ ಸಹಪಾಠಿಗೆ ಈ ವಿಷಯ ತಿಳಿಸಿದ್ದಾರೆ. ಅಪ್ರಾಪ್ತೆಯ ಸ್ನೇಹಿತೆ ಸಂತ್ರಸ್ತೆಯನ್ನು ಕರೆದೊಯ್ದು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಾಸಿಕ್ಯೂಟರ್ ಬಳಿ ಕರೆದೊಯ್ದು ವಿವರ ಸಲ್ಲಿಸಿದ್ದಾರೆ. ಬಲವಂತವಾಗಿ ಮಲತಂದೆ ಜೊತೆಗೆ ತಾಯಿಯೇ ವಿವಾಹ ಮಾಡಿಸಿದ್ದಾಳೆ ಎಂದು ಅಪ್ರಾಪ್ತೆ ದೂರಿದ್ದಾಳೆ. ಘಟನೆ ನಡೆದ ಬಗ್ಗೆ ಅರಿತ ಪೊಲೀಸರು ಸಂತ್ರಸ್ತೆಯ ತಾಯಿ ಹಾಗೂ ಆರೋಪಿ ಸಾಗರ್‌ನನ್ನು ಬಂಧಿಸಿದ್ದಾರೆ.