ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆಯ 403 ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಾರ್ಟಿ 255 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಎರಡನೇ ಅವಧಿಗೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ರಾಜ್ಯ ಒಟ್ಟು ಕ್ಷೇತ್ರಗಳ ಪೈಕಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಈ ಬಾರಿ 51 ಬ್ರಾಹ್ಮಣರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರಲ್ಲಿ 46 ಅಭ್ಯರ್ಥಿಗಳು ಭಾರತೀಯ ಜನತಾಪಾರ್ಟಿಯಿಂದ ಸ್ಪರ್ಧಿಸಿದ್ದರು. ಮತಗಳ ಹಂಚಿಕೆ ವಿಚಾರದಲ್ಲಿ ಹೇಳುವುದಾದರೆ ಒಂದು ಅಂದಾಜಿನ ಪ್ರಕಾರ, ಶೇ. 70ರಷ್ಟು ಬ್ರಾಹ್ಮಣ ಸಮುದಾಯದ ಮತಗಳು ಬಿಜೆಪಿಗೆ ಬಂದಿವೆ.
ಜಾತಿವಾರು ಲೆಕ್ಕಾಚಾರ: ಗೆದ್ದ ಅಭ್ಯರ್ಥಿಗಳ ವಿವರ ಹೀಗಿದೆ..
- ಬ್ರಾಹ್ಮಣ ಸಮುದಾಯ 51 ಶಾಸಕರು
- ರಜಪೂತ ಸಮುದಾಯ 47 ಶಾಸಕರು
- ಮುಸ್ಲಿಂ ಸಮುದಾಯ 34 ಶಾಸಕರು
- ಜಾಟವಾ ಸಮುದಾಯ 29 ಶಾಸಕರು
- ಪಸಿ ಸಮುದಾಯ 26 ಶಾಸಕರು
- ಯಾದವ ಸಮುದಾಯ 27 ಶಾಸಕರು
- ಬನಿಯಾ/ಖತ್ರಿ ಸಮುದಾಯ 22 ಶಾಸಕರು
- ಲೋಧಿ ಸಮುದಾಯ 18 ಶಾಸಕರು
- ಜಾಟ್ ಸಮುದಾಯ 15 ಶಾಸಕರು
- ಶಾಕ್ಯ ಮತ್ತು ಸೈನಿ ಸಮುದಾಯ 14 ಶಾಸಕರು
- ಇತರ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯ 12
- ಇತರೆ ಹಿಂದುಳಿದ ವರ್ಗ 10 ಶಾಸಕರು
- ಕೋರಿ ಸಮಾಜ 8 ಶಾಸಕರು
- ನಿಶಾದ್ ಕಶ್ಯಪ್ ಬಿಂದ್ ಸಮಾಜ 8 ಶಾಸಕರು
- ರಾಜ್‌ಭರ್ ಸಮಾಜ 13 ಶಾಸಕರು
ಉಳಿದಂತೆ, ಇತರೆ ಸಣ್ಣಪುಟ್ಟ ಸಮುದಾಯದ ಅಭ್ಯರ್ಥಿಗಳು ಎರಡರಿಂದ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದಾರೆ.
ಮುಸ್ಲಿಂ ಸಮುದಾಯದ 34 ಶಾಸಕರು ಗೆಲುವು ಸಾಧಿಸಿದ್ದು, ಇದರಲ್ಲಿ ಓರ್ವ ಮಾತ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಉಳಿದ 33 ಶಾಸಕರು ಬಹುಜನ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿದ್ದರು ಎಂದು ತಿಳಿದು ಬಂದಿದೆ.