ನವದೆಹಲಿ: ವಾಯುಪಡೆ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ 13 ಮಂದಿಯಲ್ಲಿ ಉಳಿದ ನಾಲ್ವರು ಸೈನಿಕರ ಪಾರ್ಥಿವ ಶರೀರದ ಗುರುತು ಪತ್ತೆಯಾಗಿದೆ. ಡಿಎನ್‌ಎ ಪರೀಕ್ಷೆಯ ಮೂಲಕ ಪತ್ತೆ ಮಾಡಲಾಗಿದ್ದು ಇಂದು(ಭಾನುವಾರ) ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಜನರಲ್ ಬಿಪಿನ್ ರಾವತ್ ಅವರ ಸಿಬ್ಬಂದಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರುಸೇವಕ್ ಸಿಂಗ್ ಮತ್ತು ನಾಯಕ್ ಜಿತೇಂದ್ರ ಕುಮಾರ್ ಅವರ ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆದಿದೆ. ಸಕಲ ಸೇನಾ ಗೌರವದೊಂದಿಗೆ ಅಂತಿಮ ವಿಧಿವಿಧಾನ ನಡೆಸಲು ಪಾರ್ಥಿವ ಶರೀರಗಳನ್ನು ದೆಹಲಿಯಿಂದ ವಿಮಾನದಲ್ಲಿ ಸ್ಥಳಾಂತರಿಸಲಾಗುತ್ತಿದೆ. ಇವರಲ್ಲಿ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಅವರ ಅಂತ್ಯಕ್ರಿಯೆಗಳು ಇಂದು ಮಧ್ಯಾಹ್ನ ದೆಹಲಿಯ ಬ್ರಾರ್ ಚೌಕದಲ್ಲಿ ನಡೆಯುವ ಸಾಧ್ಯತೆಯಿದೆ.
ಡಿ. 8ರಂದು ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ ವಾಯುಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ಸೇರಿ 13 ಮಂದಿ ಸೇನಾಧಿಕಾರಿಗಳು ನಿಧನರಾಗಿದ್ದರು. ಮಡಿದವರಲ್ಲಿ ಈಗಾಗಲೇ 9 ಮೃತದೇಹದ ಗುರುತು ಪತ್ತೆಯಾಗಿತ್ತಲ್ಲದೆ, ಕೆಲವರ ಅಂತ್ಯಕ್ರಿಯೆಯೂ ನೆರವೇರಿದೆ.
ಸೇನಾ ಪಡೆಗಳ ಮುಖ್ಯಸ್ತ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್ ಹಾಗೂ ಲಫ್ಟಿನೆಂಟ್ ಕರ್ನಲ್ ಸಿಂಗ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ಶುಕ್ರವಾರ ನಡೆದಿತ್ತು. ಉಳಿದ 6 ಮಂದಿಯ ಗುರುತು ಬಳಿಕ ಪತ್ತೆಯಾಗದ ಕಾರಣ ಅವರ ಪಾರ್ಥಿವ ಶರೀರಗಳನ್ನು ಶನಿವಾರ ರವಾನೆ ಮಾಡಲಾಗಿತ್ತು. ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚವ್ಹಾಣ್, ಸ್ಕ್ವಾರ್ಡ್ರನ್ ಲೀಡರ್ ಕುಲ್ದೀಪ್ ಸಿಂಗ್, ಜ್ಯೂನಿಯರ್ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಜ್ಯೂನಿಯರ್ ವಾರಂಟ್ ಅಧಿಕಾರಿ ಅಕ್ಕಾಲ್ ಪ್ರದೀಪ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಹಾಗೂ ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜ್ ಅವರ ಗುರುತು ಪತ್ತೆ ಹಚ್ಚಿದ ಬಳಿಕ ಇನ್ನುಳಿದ ನಾಲ್ವರ ಡಿಎನ್‌ಎ ವರದಿ ಬಾಕಿಯಿತ್ತು.
ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಹವಾಲ್ದಾರ್ ಸತ್ಪಾಲ್ ರೈ, ನಾಯಕ್ ಗುರಸೇವಕ್ ಹಾಗೂ ನಾಯಕ್ ಜಿತೇಂದ್ರ ಕುಮಾರ್ ಅವರ ಪಾರ್ಥೀವ ಶರೀರಗಳು ಇಂದು ಅವರವರ ತವರೂರು ತಲುಪಲಿದ್ದು, ಅಂತ್ಯಕ್ರಿಯೆ ನೆರವೇರಲಿದೆ.
ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವರುಣ್ ಸಿಂಗ್‌ರನ್ನು ಬೆಂಗಳೂರಿನ ಸೇನಾ ಆಸ್ಪತ್ರೆಯಾದ ಕಮಾಂಡ್ದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ವರ್ಷದ ನಂತರ ಮನೆಯತ್ತ ಮುಖ ಮಾಡಿದ ಅನ್ನದಾತರು.. ವಿಮಾನದ ಮೂಲಕ ಹೂವುಗಳ ಸುರಿಮಳೆ!