ಜಮ್ಮು-ಕಾಶ್ಮೀರ: ಭೂಮಿ ಮೇಲಿನ ಸ್ವರ್ಗ ಕಾಶ್ಮೀರ ಕಣಿವೆಯ ನೈಸರ್ಗಿಕ ಸೌಂದರ್ಯ ನೋಡುವುದೇ ಕಣ್ಣಿಗೆ ಹಬ್ಬ. ಲಕ್ಷಾಂತರ ಪ್ರವಾಸಿಗರನ್ನು ಎಲ್ಲ ಕಡೆಗಳಿಂದಲೂ ಸೆಳೆಯುವ ಆ ಸುಂದರ ಪ್ರಾಕೃತಿಕ ತಾಣಗಳನ್ನು, ಅದೆಷ್ಟೋ ಸಾರಿ ನೋಡಿದ್ದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ವಿಶ್ವ ಪ್ರಸಿದ್ಧ ಸ್ಥಳಗಳಾದ ಗುಲ್ಮಾರ್ಗ್, ಪಹಲ್ಗಾಂ ಮತ್ತು ದಾಲ್ ಸರೋವರಗಳು ಈ ಸ್ವರ್ಗದ ಸಂಕೇತಗಳಾಗಿವೆ. ಆದರೆ, ಇಲ್ಲಿ ‘ಸಾವಿನ ಕಣಿವೆ’ ಎಂದು ಕರೆಯಲ್ಪಡುವ ಸ್ಥಳವೊಂದು ಇದೆ. ಇದು ಬಹಳ ಜನರಿಗೆ ತಿಳಿದಿಲ್ಲ. ಅದೇ ಮಾರ್ಗನ್ ವ್ಯಾಲಿ ಅಥವಾ ಮಾರ್ಗನ್ ಟಾಪ್.
ಮಾರ್ಗನ್ ಕಣಿವೆಯು ಸಮುದ್ರ ಮಟ್ಟದಿಂದ 12,125 ಅಡಿ ಎತ್ತರದ ಪರ್ವತ ಹಾದಿಯಾಗಿದ್ದು, ದಕ್ಷಿಣ ಅನಂತ್‌ನಾಗ್ ಜಿಲ್ಲೆಯ ಮುಖ್ಯ ಪಟ್ಟಣದಿಂದ 72 ಕಿಲೋಮೀಟರ್ ದೂರದಲ್ಲಿದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯ ನೋಡುಗರಿಗೆ ಸುಗ್ಗಿ. ಆದರೆ, ಇದು ಮಾರಣಾಂತಿಕ ಹಿಮಪಾತ, ಪ್ರಬಲ ಗಾಳಿ ಮತ್ತು ಅಧಿಕ ಮಳೆಯಿಂದಾಗಿ ಅಪಾಯಕಾರಿ ಸ್ಥಳವೆಂದು ಗುರುತಿಸಿಕೊಂಡಿದೆ. ಕುತೂಹಲಕಾರಿಯಾಗಿ, ಅಸುರಕ್ಷಿತ ಸ್ಥಳವಾಗಿದ್ದರೂ ಮಾರ್ಗನ್ ಕಣಿವೆ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ.
ಮಾರ್ಗನ್ ಕಣಿವೆಯು ಕಲ್ಲಿನ ಪರ್ವತಗಳಿಂದ ಕೂಡಿದ್ದು, ಇಲ್ಲಿ ಯಾವುದೇ ಮರಗಳಿಲ್ಲ. ಜೋರಾದ ಗಾಳಿ ಮತ್ತು ಆಲಿಕಲ್ಲು ಮಳೆಯಿಂದ ಇಲ್ಲಿಯ ಸುತ್ತಮುತ್ತಲಿನ ಪರ್ವತ ಶಿಖರಗಳಿಂದ ಬಂಡೆಗಳು ಕೆಳಗೆ ಬೀಳುತ್ತವೆ. ಇದು ಅಲ್ಲಿನ ಸ್ಥಳೀಯರಿಗೆ ದೊಡ್ಡ ಸವಾಲಾಗಿದ್ದು, ಸುತ್ತಲಿನ ಅಲೆಮಾರಿಗಳು ಇಂತಹ ಕಠಿಣ ಹವಾಮಾನ ಪರಿಸ್ಥಿತಿಯಿಂದ ತುಂಬಾ ತೊಂದರೆಗೆ ಸಿಲುಕುತ್ತಾರೆ.
ಮಾರ್ಗನ್ ಕಣಿವೆ ಕಿಶ್ತ್ವಾರ್ ಮತ್ತು ಅನಂತ್‌ನಾಗ್ ಜಿಲ್ಲೆಗಳ ನಡುವೆ ಇದೆ. ಇದು ಎತ್ತರದ ಸ್ಥಳವಾಗಿರುವುದರಿಂದ, ಬೇಸಿಗೆಯಲ್ಲಿಯೂ ಇಲ್ಲಿ ತಾಪಮಾನ ಕಡಿಮೆ ಇರುತ್ತದೆ. ಹಠಾತ್ ಮಳೆ ಅಥವಾ ಹಿಮದಿಂದಾಗಿ ಇಲ್ಲಿ ಪ್ರಯಾಣಿಕರು ಸಿಲುಕಿಕೊಳ್ಳುತ್ತಾರೆ.
ಈ ಸ್ಥಳವನ್ನು ಹೆಚ್ಚು ಸುರಕ್ಷಿತ ಮತ್ತು ಇಲ್ಲಿಗೆ ಸುಲಭವಾಗಿ ಹೋಗಲು ಸರ್ಕಾರವು, ಯೋಜನೆಯನ್ನು ಹಾಕಿಕೊಂಡಿದೆ. ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ ಎಂಬುದು ಅರ್ಷಿದ್ ಸಲಾಮ್ ಅವರ ಮಾತು.
ಪ್ರಸ್ತುತ ಅಧಿಕಾರಿಗಳು ಮಾರ್ಗನ್ ಕಣಿವೆಯಲ್ಲಿ ಗುಡಿಸಲುಗಳು ಮತ್ತು ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಈ ಸ್ಥಳವು ಕಾಶ್ಮೀರದ ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ.