ನವದೆಹಲಿ: 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಭಾಗವಾಗಿ ಆಯುಷ್ ಸಚಿವಾಲಯವು ಮಕರ ಸಂಕ್ರಾಂತಿ (ಜನವರಿ 14) ಸಂದರ್ಭದಲ್ಲಿ ಜಾಗತಿಕವಾಗಿ 75 ಲಕ್ಷ ಜನರಿಗೆ ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯುಷ್ ಸಚಿವ ಸರ್ಬಾನಂದ ಸೊನೊವಾಲ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ, ಆಯುಷ್ ಸಚಿವಾಲಯವು ಜಾಗತಿಕವಾಗಿ 75 ಲಕ್ಷ ಜನರಿಗೆ ಜಾಗತಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ನೋಂದಣಿ ಮಾಡಲಾಗುತ್ತಿದ್ದು, ಮಕರ ಸಂಕ್ರಾಂತಿಯಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಮಕರ ಸಂಕ್ರಾಂತಿ ದಿನದಂದು ಸೂರ್ಯನು ಉತ್ತರಾರ್ಧಗೋಳವನ್ನು ಪ್ರವೇಶಿಸುತ್ತಾನೆ.
ಸೂರ್ಯ ನಮಸ್ಕಾರವು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಜನರಲ್ಲಿ ರೋಗನಿರೋಧಕ ಮಟ್ಟ ಹೆಚ್ಚಿಸುವ ಅಗತ್ಯವಿದೆ. ದೇಹವನ್ನು ಮಾತ್ರವಲ್ಲದೇ ಮನಸನ್ನು ಸದೃಢಗೊಳಿಸಲು ಸೂರ್ಯ ನಮಸ್ಕಾರ ಸಹಾಕಾರಿ.
ಜೊತೆಗೆ ಎಲ್ಲ ಜೀವಗಳನ್ನು ಪೋಷಿಸುವ ಸೂರ್ಯನ ಕಿರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸಲು ಹಾಗೂ ಸಂಕ್ರಾಂತಿಯ ದಿನದಂದು ಸೂರ್ಯನಿಗೆ ವಂದಿಸಲು ಸೂರ್ಯ ನಮಸ್ಕಾರ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಅಂದಾಜು ಒಂದು ಕೋಟಿಗೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಓದಿ: 60 ಅಧಿಕಾರಿಗಳು ಸೇರಿದಂತೆ 370 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸಂಕಟ.. ಮುಂಬೈ ಇಲಾಖೆಯಲ್ಲೇ ದಾಖಲೆ ಸಾವು!