ಕತಿಹಾರ್(ಬಿಹಾರ): ಬಿಹಾರದಲ್ಲಿ ಜನರ ಬ್ಯಾಂಕ್ ಖಾತೆಗಳಿಗೆ ಭಾರಿ ಪ್ರಮಾಣದ ಹಣ ಜಮೆಯಾಗುತ್ತಿರುವ ಘಟನೆಗಳು ಮುಂದುವರೆದಿವೆ. ನಿನ್ನೆಯಷ್ಟೇ ವ್ಯಕ್ತಿಯೋರ್ವನ ಬ್ಯಾಂಕ್ ಖಾತೆಗೆ 5.5 ಲಕ್ಷ ರೂಪಾಯಿ ಹಣ ಜಮೆಯಾಗಿತ್ತು. ಈ ಬೆನ್ನಲ್ಲೇ ಇದೀಗ ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬರೋಬ್ಬರಿ 960 ಕೋಟಿ ರೂ. ಜಮೆಯಾಗಿದೆ.
ಬಿಹಾರದ ಕತಿಹಾರದ ಅಜಮ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಏಕಾಏಕಿ 960 ಕೋಟಿ ರೂಪಾಯಿ ಬಂದಿದೆ. ಇಷ್ಟೊಂದು ಹಣ ಜಮೆಯಾಗುತ್ತಿದ್ದಂತೆ ವಿದ್ಯಾರ್ಥಿಗಳು, ಪೋಷಕರ ಜೊತೆಗೆ ಬ್ಯಾಂಕ್ ಅಧಿಕಾರಿಗಳೂ ಕೂಡಾ ಅಚ್ಚರಿಗೊಳಗಾಗಿದ್ದಾರೆ.
ಪಾಸ್ಟಿಯಾ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳಾದ ಗುರು ಚರಣ್ ವಿಶ್ವಾಸ್ ಖಾತೆಗೆ 905 ಕೋಟಿ ರೂ. ಹಾಗೂ ಅಶಿಶ್ ಖಾತೆಗೆ 60 ಕೋಟಿ 20 ಲಕ್ಷದ 11 ಸಾವಿರ ರೂಪಾಯಿ ಬಂದಿದೆ.
ಹಣ ಜಮಾವಣೆಗೊಂಡಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಗ್ರಾಮೀಣ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಮನೋಜ್ ಗುಪ್ತಾ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದಾರೆ. ಜೊತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಕತಿಹಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಯನ್ ಮಿಶ್ರಾ ಅವರು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ತಾಂತ್ರಿಕ ದೋಷದಿಂದಾಗಿ ಮಿನಿ ಸ್ಟೇಟ್ಮೆಂಟ್ನಲ್ಲಿ ಈ ರೀತಿಯ ಹಣ ಕಾಣಿಸುತ್ತಿದೆ ಎನ್ನಲಾಗಿದೆ.
ವಿದ್ಯಾರ್ಥಿಗಳ ಪೋಷಕರಿಗೆ ಗೊತ್ತಾಗಿದ್ದು ಹೇಗೆ?
ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ನೀಡಿರುವ ಮೊಬೈಲ್ಗೆ ಸಂದೇಶ ಬಂದಿದೆ. ಈ ವೇಳೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕಂಪ್ಯೂಟರ್ ಸೆಂಟರ್ಗೆ ಹೋಗಿ ಮಿನಿ ಸ್ಟೇಟ್ಮೆಂಟ್ ಚೆಕ್ ಮಾಡಿದಾಗ ಹಣ ಜಮಾವಣೆಗೊಂಡಿರುವುದು ಖಚಿತವಾಗಿದೆ. ಈ ವೇಳೆ ಅವರು ಬ್ಯಾಂಕ್ಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.