ಛತ್ತೀಸ್‌ಗಢ : ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಆತಂಕ ಉಂಟಾಗಿದೆ. ಕೋವಿಡ್-19 ವೈರಸ್ ಲಸಿಕೆ ನೀಡಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಇದೀಗ ಕೊರೊನಾ ಸೋಂಕಿಗೆ ಹೆದರಿ ಬರೋಬ್ಬರಿ 700ಕ್ಕೂ ಹೆಚ್ಚು ನಕ್ಸಲರು ಲಸಿಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ದಾಂತೇವಾಡದಲ್ಲಿ ನಡೆದ ಲೋನ್ ವರಟು ಅಭಿಯಾನದಿಂದ (Lon Varratu campaign) ಪ್ರಭಾವಿತರಾದ ನಕ್ಸಲೀಯ ದಂಪತಿ ಪೊಲೀಸರಿಗೆ ಶರಣಾದರು. ಈ ಹಿನ್ನೆಲ್ಲೆ ನಕ್ಸಲ್ ದಂಪತಿಗೆ ಛತ್ತೀಸ್‌ಗಢ ಸರ್ಕಾರ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ನಕ್ಸಲೈಟ್ ಪೊಜ್ಜಾ, ಕೊರೊನಾ ಅವಧಿಯಲ್ಲಿ 700ಕ್ಕೂ ಹೆಚ್ಚು ನಕ್ಸಲೀಯರು ಕೊರೊನಾ ಲಸಿಕೆ ಪಡೆದಿದ್ದಾರೆ. ನಕ್ಸಲ್ ದಾಳಿಯ ಮಾಸ್ಟರ್ಮೈಂಡ್ಗಳಾದ ಹಿದ್ಮಾ, ಸುಜಾತ, ವಿಕಾಸ್, ರಘು ಸೇರಿದಂತೆ ಅನೇಕ ನಕ್ಸಲೀಯರು ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ.
ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಆಂಧ್ರಪ್ರದೇಶ, ತೆಲಂಗಾಣದ ನಕ್ಸಲ್ ನಾಯಕರು ಛತ್ತೀಸ್‌ಗಢದ ನಾರಾಯಣಪುರ, ಸುಕ್ಮಾ, ದಾಂತೇವಾಡ, ಬಿಜಾಪುರ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ಸರಬರಾಜು ಮಾಡಿದ್ದರು ಎಂದು ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ಮಾವೋವಾದಿಗಳಿಗೆ ಎಚ್ಚರಿಕೆ ಸಂದೇಶ ನೀಡುವ ಜೊತೆಗೆ ಶರಣಾಗುವಂತೆ ಮನವಿ ಮಾಡಿದ್ದಾರೆ. ಸರ್ಕಾರ ಶರಣಾಗತಿ ಪ್ಯಾಕೇಜ್ ರೂಪಿಸಿದೆ. ಜೊತೆಗೆ ನೀವು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೆ ಪೊಲೀಸ್ ಆಡಳಿತ ನಿಮಗೆ ಸರಿಯಾದ ಚಿಕಿತ್ಸೆ ನೀಡಲಿದೆ ಎಂದು ತಿಳಿಸಿದ್ದಾರೆ.