ಉನ್ನಾವೋ (ಉತ್ತರಪ್ರದೇಶ) : ಅತ್ಯಾಚಾರ ಮತ್ತು ಕೊಲೆ ಕೇಸ್ಗೆ ಸಂಬಂಧಿಸಿದಂತ ಕುಖ್ಯಾತಿ ಹೊಂದಿದ್ದ ಉತ್ತಪ್ರದೇಶದ ಉನ್ನಾವೋದಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಅಂದರೆ ಗುರುವಾರ ಈ ಘಟನೆ ನಡೆದಿದೆ. ವಿಚಿತ್ರ ಅಂದರೆ, ಅವರ ಮೈಮೇಲೆ 500 ಕ್ಕೂ ಅಧಿಕ ಪರಚಿದ ಗುರುತುಗಳು ಇದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಹಿಳಾ ಕಾನ್ಸ್ಟೇಬಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಕೋನಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ಪ್ರೇರೇಪಣೆ ನೀಡಲಾಗಿತ್ತಾ ಎಂಬ ಬಗ್ಗೆಯೂ ಅನುಮಾನಿಸಲಾಗಿದೆ. ಗುರುವಾರ ಎಂದಿನಂತೆ ಕೆಲಸ ಮುಗಿಸಿಕೊಂಡು ತಮ್ಮ ಹಾಸ್ಟೆಲ್ಗೆ ತೆರಳಿದ್ದ ಮಹಿಳಾ ಕಾನ್ಸ್ಟೇಬಲ್ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಕಂಡವರು ನೇತಾಡುತ್ತಿದ್ದ ಅವರನ್ನು ಕೆಳಗೆ ಇಳಿಸಿ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಅಲ್ಲಿಂದ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಾಗ ಉಸಿರು ಚೆಲ್ಲಿದ್ದಾರೆ.
ಸಾವಿನ ಹಿಂದಿದೆಯಾ ಪ್ರೇಮ ವೈಫಲ್ಯ: ಸಾವಿಗೀಡಾದ ಮಹಿಳಾ ಕಾನ್ಸ್ಟೇಬಲ್ ಅಲಿಗಢದ ಪೊಲೀಸ್ ಪೇದೆ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಆತ ಬೇರೊಂದು ಮದುವೆಯಾಗಿದ್ದು, ಈಕೆಗೆ ವಂಚಿಸಿದ್ದನಾ ಎಂಬ ಶಂಕೆ ಇದೆ. ಮಹಿಳಾ ಕಾನ್ಸ್ಟೇಬಲ್ ಕರೆ ಮಾಡಿದರೂ ಆತ ಸ್ವೀಕರಿಸುತ್ತಿರಲಿಲ್ಲ. ಇದು ಮಹಿಳಾ ಪೇದೆಗೆ ತೀವ್ರ ಆಘಾತ ಉಂಟು ಮಾಡಿದೆ ಎನ್ನಲಾಗಿದೆ. ಬಹುಶಃ ಅದಕ್ಕಾಗಿಯೇ ಆಕೆ ತನ್ನನ್ನು ತಾನೇ ಗಾಯಮಾಡಿಕೊಂಡಿರಬೇಕು. ಹೀಗಾಗಿ ದೇಹದ ಮೇಲೆ ಗಾಯದ ಗುರುತುಗಳು ಮೂಡಿವೆ ಎಂದು ಹೇಳಲಾಗಿದೆ.
ಕಾನ್ಸ್ಟೇಬಲ್ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ಪೊಲೀಸರು ತನಿಖೆ ಚುರುಕು ಮಾಡಿದ್ದಾರೆ. ವೈದ್ಯರ ಸಮಿತಿಯಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಸ್ಥರು ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸ್ ಅಧಿಕಾರಿ ಅಶುತೋಷ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ: ಮರಣೋತ್ತರ ಪರೀಕ್ಷಾ ವರದಿಯಲ್ಲಿ, ದೇಹದ ಮೇಲೆ 500 ಕ್ಕೂ ಹೆಚ್ಚು ಪರಚಿದ ಗುರುತುಗಳು ಕಂಡುಬಂದಿವೆ. ಜೊತೆಗೆ ಆಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದನ್ನು ವರದಿಯಲ್ಲಿ ದೃಢಪಟ್ಟಿದೆ. ದೇಹದ ಮೇಲಿನ ಗಾಯಗಳು ಆತ್ಮಹತ್ಯೆಗೆ ಕಾರಣವೇ ಎಂಬುದನ್ನು ಪೊಲೀಸರು ತನಿಖೆಯಲ್ಲಿ ಪತ್ತೆ ಮಾಡಬೇಕಿದೆ.
ಇದನ್ನೂ ಓದಿ: ಪ್ಲೈವುಡ್ ಕಾರ್ಖಾನೆಯಲ್ಲಿ ವಲಸೆ ಕಾರ್ಮಿಕ ಕುಟುಂಬದ ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ