ನವದೆಹಲಿ: ದೇಶದಲ್ಲಿ 20 ಕೋಟಿಗೂ ಹೆಚ್ಚು ಮಂದಿ ಮಾದಕ ವ್ಯಸನಿಗಳಾಗಿದ್ದಾರೆ ಅಥವಾ ಮಾದಕ ದ್ರವ್ಯಗಳ ಸಾಗಣೆಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರತನ್ ಲಾಲ್ ಕಟಾರಿಯಾ ಶನಿವಾರ ಹೇಳಿದ್ದಾರೆ.
ಮಾದಕವಸ್ತು ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನದ ಸಂದರ್ಭದಲ್ಲಿ ಮಾತನಾಡಿದ ಅವರು, ಒಟ್ಟು 6 ಕೋಟಿ ಜನರು ಮಾದಕ ದ್ರವ್ಯಗಳ ವ್ಯವಹಾರ ಮತ್ತು ವ್ಯಸನದಲ್ಲಿ ತೊಡಗಿಸಿಕೊಂಡಿದ್ದಾರೆ. ಆಲ್ಕೊಹಾಲ್, ಗಾಂಜಾ ಮತ್ತಿತರ ವ್ಯಸನಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಆ ಸಂಖ್ಯೆ 20 ಕೋಟಿ ದಾಟುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 15ರಂದು ನಾವು 272 ಜಿಲ್ಲೆಗಳಲ್ಲಿ ಮಾದಕ ವ್ಯಸನ ಮುಕ್ತ ಭಾರತ್ ಅಭಿಯಾನವನ್ನು (ಎನ್‌ಎಂಬಿಎ) ಪ್ರಾರಂಭಿಸಿದ್ದೇವೆ ಮತ್ತು 10 ತಿಂಗಳಲ್ಲಿ ನಾವು 35 ಲಕ್ಷ ಯುವಕರು, 6,000 ಶಿಕ್ಷಣ ಸಂಸ್ಥೆಗಳು ಮತ್ತು 25 ಲಕ್ಷ ಮಹಿಳೆಯರನ್ನು ಕಾರ್ಯಕ್ರಮದಡಿಯಲ್ಲಿ ತೊಡಗಿಸಿಕೊಂಡಿದ್ದೇವೆ" ಎಂದು ರತನ್ ಲಾಲ್ ಕಟಾರಿಯಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 25 ಪೈಸೆ ಇದ್ರೆ ಸಾಕು ನೀವು ಲಕ್ಷಾಧಿಪತಿ ಆಗಬಹುದು..! ಹೇಗೆ ಗೊತ್ತಾ...?
ಮಾದಕ ವ್ಯಸನ ಮುಕ್ತ ಭಾರತ್ ಅಭಿಯಾನ ಅಡಿಯಲ್ಲಿ ಆಯ್ಕೆಯಾದ 272 ಜಿಲ್ಲೆಗಳಲ್ಲಿ, 100 ಜಿಲ್ಲೆಗಳನ್ನು ಮಾದಕವಸ್ತು ಮುಕ್ತಗೊಳಿಸಲು ನಿರ್ಧರಿಸಿದ್ದೇವೆ. 18 ಜಿಲ್ಲೆಗಳಲ್ಲಿ ಕಾರ್ಯಕ್ರಮ ಜಾರಿಯಲ್ಲಿದ್ದು ಪಂಜಾಬ್ ಅಪಾರ ಸಾಧನೆ ಮಾಡಿದೆ. ಅಭಿಯಾನ ಪ್ರಾರಂಭವಾದ ಕಳೆದ 10 ತಿಂಗಳಲ್ಲಿ 70 ಸಾವಿರ ಯುವಕರು, 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸೇರಿದಂತೆ 92 ಸಾವಿರ ಜನರ ಅಭಿಯಾನ ತಲುಪಿದೆ ಎಂದು ಕಟಾರಿಯಾ ಹೇಳಿದ್ದಾರೆ.