ಅಹಮದಾಬಾದ್(ಗುಜರಾತ್): ಮೋರ್ಬಿಯಲ್ಲಿ ನಡೆದ ಸೇತುವೆ ದುರಂತ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಮೃತರ ಸಂಬಂಧಿಕರಿಗೆ ನೀಡಿದ ನಾಲ್ಕು ಲಕ್ಷ ಪರಿಹಾರ ಸಾಲದು, 10 ಲಕ್ಷ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ.
ಅಪಘಾತದಲ್ಲಿ 7 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಪ್ರತಿ ಮಗುವಿಗೆ ಸರ್ಕಾರದಿಂದ 37 ಲಕ್ಷ ರೂಪಾಯಿ ನೀಡಲಾಗುವುದು. ಇದಲ್ಲದೇ ರಾಜ್ಯಾದ್ಯಂತ ಇರುವ ಎಲ್ಲ ಸೇತುವೆಗಳನ್ನು ಸರ್ವೇ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಇದರಲ್ಲಿ ಎಲ್ಲಾ ಸೇತುವೆಗಳ ಪಟ್ಟಿಯನ್ನು ಹೈಕೋರ್ಟ್ ಕೇಳಿದೆ. ಈ ಬಗ್ಗೆ 10 ದಿನದೊಳಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಒರೆವಾ ಗ್ರೂಪ್ ವಿರುದ್ಧ ಈವರೆಗೂ ಯಾವುದೇ ಕ್ರಮ ಏಕೆ ಕೈಗೊಂಡಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಮೋರ್ಬಿ ದುರಂತದಲ್ಲಿ 135ಕ್ಕೂ ಹೆಚ್ಚು ಮಂದಿ ಮೃತಪಟ್ಟ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನವೆಂಬರ್ 21 ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಆದರೆ ಸಿಬಿಐ ತನಿಖೆ ಮತ್ತು ಹೆಚ್ಚಿನ ಪರಿಹಾರದ ಬೇಡಿಕೆಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಲ್ಲದೆ ಈ ಪ್ರಕರಣದ ವಿಚಾರಣೆ ಸದ್ಯ ಹೈಕೋರ್ಟ್‌ನಲ್ಲಿ ನಡೆದಿದ್ದು, ಹೈಕೋರ್ಟ್‌ಗೆ ಹೋಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಇದರ ಅನ್ವಯ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಹೈಕೋರ್ಟ್ ಸ್ವತಂತ್ರ ವಿಚಾರಣೆ, ತನಿಖೆ ಮತ್ತು ಕಾನೂನು ಕ್ರಮದ ಅಂಶವನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಎಲ್ಲಾ ಅಂಶಗಳನ್ನು ಆಲಿಸಲು ನಿಯಮಿತ ಮಧ್ಯಂತರದಲ್ಲಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್‌ಗೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಮುಂದೆ ಮಧ್ಯಪ್ರವೇಶಿಸಬೇಕೆಂದು ಅವರು ಭಾವಿಸಿದರೆ, ಅವರು ಮತ್ತೆ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಅರ್ಜಿದಾರರಿಗೆ ತಿಳಿಸಿದೆ. ನೊಂದವರಿಗೆ ಪರಿಹಾರವಾಗಿ ನಿರ್ದಿಷ್ಟ ಮೊತ್ತ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ ಚುನಾವಣೆ: ಮೋರ್ಬಿ ಶಾಸಕ ಸೇರಿ ಐವರು ಸಚಿವರಿಗೆ ಬಿಜೆಪಿ ಟಿಕೆಟ್ ಇಲ್ಲ