ನವದೆಹಲಿ: ಜೂನ್3 ರಂದು ನೈರುತ್ಯ ಮಾನ್ಸೂನ್ ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಜೂನ್ 1ರಂದು ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಕರಾವಳಿಯಲ್ಲಿ ಹವಾಮಾನ ಬದಲಾಗುತ್ತಿದ್ದು, ನಾಳೆ ಕೇರಳದಲ್ಲಿ ಮಳೆಯಾಗುವ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಮುಂದೆ ಈಶಾನ್ಯ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.
ಇದರಿಂದ ಮುಂದಿನ 5 ದಿನಗಳಲ್ಲಿ ಕೇರಳದಲ್ಲಿ ಮಳೆಯಾದರೆ ಜೂನ್ 1 ಮತ್ತು ಜೂನ್ 3ರಂದು ಕರಾವಳಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದಲ್ಲದೆ ದಕ್ಷಿಣ ಕರ್ನಾಟಕದ ಒಳನಾಡಿನಲ್ಲಿ ಜೂನ್ 2 ಮತ್ತು 3 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ 2-3 ದಿನಗಳಲ್ಲಿ ನೈರುತ್ಯ ಮುಂಗಾರು ಇನ್ನಷ್ಟು ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಅರಬ್ಬೀ ಸಮುದ್ರದಿಂದ ವಾಯುವ್ಯ ಭಾರತದ ಬಯಲು ಪ್ರದೇಶಕ್ಕೆ ಕೆಳಮಟ್ಟದ ತೇವಾಂಶ ಸಂಚರಿಸುತ್ತಿದೆ ಮತ್ತು ಮುಂದಿನ 3-4 ದಿನಗಳಲ್ಲಿ ಇದು ಮುಂದುವರಿಯುವ ಸಾಧ್ಯತೆಯಿದೆ.
ಮುಂದಿನ 4-5 ದಿನಗಳಲ್ಲಿ ಪಶ್ಚಿಮ ಹಿಮಾಲಯನ್ ಪ್ರದೇಶ ಮತ್ತು ವಾಯುವ್ಯ ಭಾರತದ ಪಕ್ಕದ ಬಯಲು ಪ್ರದೇಶಗಳಲ್ಲಿ ಚದುರಿದ ಮಳೆ / ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.