ರಾಂಚಿ (ಜಾರ್ಖಂಡ್): ನರೇಗಾ ಯೋಜನೆಯ ಅವ್ಯವಹಾರ ಮತ್ತು ಅಕ್ರಮ ಗಣಿ ಆರೋಪ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರ್ಖಂಡ್ನ ಗಣಿ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ವು 19.31 ಕೋಟಿ ರೂ. ಮೌಲ್ಯದ ನಗದು ಹಣ ವಶಪಡಿಸಿಕೊಂಡಿದೆ. ಅಲ್ಲದೇ, ಈ ಪ್ರಕರಣದಲ್ಲಿ ಸುಮನ್ ಕುಮಾರ್ನನ್ನು ಬಂಧಿಸಲಾಗಿದೆ. ಇವರ ಸಹೋದರ ಪವನ್ನನ್ನು ಇಡಿ ವಿಚಾರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಪೂಜಾ ಸಿಂಘಾಲ್ ಅವರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.
2008 ರಿಂದ 11ರ ಅವಧಿಯಲ್ಲಿ ಜಾರ್ಖಂಡ್ನ ಖುಂತಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 18 ಕೋಟಿ ರೂ.ಗೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡ ಆರೋಪ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ. ಹೀಗಾಗಿ ಗಣಿಗಾರಿಕೆ ಕಾರ್ಯದರ್ಶಿ ಪೂಜಾ ಸಿಂಘಾಲ್ ನಿವಾಸ ಸೇರಿ ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಒಟ್ಟಾರೆ 18 ಕಡೆಗಳಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲಿಸಲಾಗಿತ್ತು.
ಇಷ್ಟೇ ಅಲ್ಲ, ಸಿಂಘಾಲ್ ಒಡೆತನದ ಪಲ್ಸ್ ಆಸ್ಪತ್ರೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತ, ಇವರ ಸಿಎಯಾದ ಸುಮನ್ ಕುಮಾರ್ ಮೂಲತಃ ಬಿಹಾರದರಾಗಿದ್ದಾರೆ. ವಿದ್ಯಾರ್ಥಿಯಾಗಿದ್ದಾಗ ಜ್ಯೋತಿಷ್ಯದ ಬಗ್ಗೆ ಅಪಾರ ಒಲವು ಹೊಂದಿದ್ದ ಸುಮನ್, ಹಸ್ತಸಾಮುದ್ರಿಕ ಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಓದುತ್ತಿದ್ದರು. ಸಿಎ ವ್ಯಾಸಂಗ ಮುಗಿಸಿದ ಬಳಿಕ ಹಲವು ಹಿರಿಯ ಅಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.
ಇತ್ತ, ಈ ಹಿಂದೆಯೇ ಮಾಜಿ ಇಂಜಿನಿಯರ್ ರಾಮ್ ವಿನೋದ್ ಪ್ರಸಾದ್ ಸಿನ್ಹಾ ಎಂಬುವರನ್ನು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಇಡಿ ಬಂಧಿಸಿದೆ. ಅಲ್ಲದೇ, ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಆಪ್ತರಿಗೆ ಸಂಬಂಧಿಸಿದ 150 ಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಸ್ಟಾಲಿನ್ ಸರ್ಕಾರಕ್ಕೆ ಒಂದು ವರ್ಷ: ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಉಚಿತ ಉಪಾಹಾರ ಯೋಜನೆ ಘೋಷಣೆ