ನವದೆಹಲಿ: ಸಾಧಾರಣ ಜೀವನ ನಡೆಸುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಷ್ಟು ಆಸ್ತಿ ಇದೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಸಾಕಷ್ಟು ಮಂದಿಗೆ ಇರುತ್ತದೆ. ಪ್ರತಿ ವರ್ಷ ಪ್ರಧಾನಿ ತನ್ನ ಆಸ್ತಿಯ ವಿವರಗಳನ್ನು ಅಧಿಕೃತವಾಗಿ ಬಹಿರಂಗಪಡಿಸುತ್ತಾರೆ. ಈ ಬಾರಿಯೂ ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ಬಹಿರಂಗವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ಅಧಿಕೃತವಾಗಿ ತಮ್ಮ ಆಸ್ತಿಗಳ ವಿವರಗಳನ್ನು ಬಹಿರಂಗಪಡಿಸುತ್ತಾರೆ. 2020ರಲ್ಲಿ 2.85 ಕೋಟಿ ರೂಪಾಯಿಗಳಷ್ಟಿದ್ದ ಅವರ ಆಸ್ತಿಯಲ್ಲಿ 22 ಲಕ್ಷ ರೂಪಾಯಿ ಹೆಚ್ಚಾಗಿದೆ. 2021ರಲ್ಲಿ ಘೋಷಿಸಿಕೊಂಡಿರುವಂತೆ ನಮೋ ಆಸ್ತಿ 3 ಕೋಟಿ 7 ಲಕ್ಷ ರೂಪಾಯಿಗಳ ನಿವ್ವಳ ಆಸ್ತಿ ಹೊಂದಿದ್ದಾರೆ.
ಅನೇಕ ಕೇಂದ್ರ ಸಚಿವರಂತೆ ಮೋದಿ ಅವರು ಷೇರು ಮಾರುಕಟ್ಟೆಯಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ಅವರ ಮುಖ್ಯ ಆದಾಯದ ಮೂಲ ಎಂದರೆ ಸರ್ಕಾರದಿಂದ ಬರುವ 2 ಲಕ್ಷ ರೂ. ವೇತನ. ಅದನ್ನು ಫಿಕ್ಸೆಡ್ ಡೆಪಾಸಿಟ್‌ನಲ್ಲಿ ಇರಿಸಿ, ಅದರಿಂದ ಬರುವ ಬಡ್ಡಿಯನ್ನು ಮರು ಹೂಡಿಕೆ ಮಾಡಿರುವುದರಿಂದ ಪ್ರಧಾನಿ ಅವರ ಆದಾಯ ಹೆಚ್ಚಾಗಿರುವುದಕ್ಕೆ ಕಾರಣ ಎನ್ನಲಾಗ್ತಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (8.9 ಲಕ್ಷ ರೂ.), ಎಲ್‌ಐಸಿ ಪಾಲಿಸಿಗಳು (1.5 ಲಕ್ಷ ರೂ.), 2012ರಲ್ಲಿ ಎಲ್ ಅಂಡ್ ಟಿ ಇನ್‌ಫ್ರಾಸ್ಟ್ರಕ್ಚರ್ ಬಾಂಡ್‌ಗಳನ್ನು 20 ಸಾವಿರ ರೂಪಾಯಿಗೆ ಖರೀದಿಸಿದ್ದಾರೆ. ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸ್ಥಿರ ಠೇವಣಿ ಇಟ್ಟಿದ್ದಾರೆ. ಕಳೆದ ವರ್ಷ ಸ್ಥಿರ ಠೇವಣಿ ಮೌಲ್ಯ 1.6 ಕೋಟಿ ರೂ., ಈ ವರ್ಷ ಮಾರ್ಚ್ 31ಕ್ಕೆ ಇದು 1.86 ಕೋಟಿ ರೂಪಾಯಿ ಆಗಿದೆ.
ಪ್ರಧಾನಿ ಬಳಿ ಸ್ವಂತ ವಾಹನ ಇಲ್ಲ!
ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸ್ವಂತ ವಾಹನ ಇಲ್ಲ. ಇವರ ಬಳಿ ನಾಲ್ಕು ಚಿನ್ನದ ಉಂಗುರಗಳಿದ್ದು, ಅವುಗಳ ಮೌಲ್ಯ1 ಲಕ್ಷದ 48 ಸಾವಿರ ರೂಪಾಯಿಗಳು. ಬ್ಯಾಂಕ್ ಖಾತೆಯಲ್ಲಿ 1.5 ಲಕ್ಷ ರೂಪಾಯಿಗಳು ಇದ್ದು, 36 ಸಾವಿರ ನಗದು ಹೊಂದಿದ್ದಾರೆ.
ಮೋದಿ ಅವರು 2014 ರಲ್ಲಿ ಪ್ರಧಾನಿಯಾದ ನಂತರ ಯಾವುದೇ ಆಸ್ತಿಗಳನ್ನು ಖರೀದಿಸಿಲ್ಲ. 2002ರಲ್ಲಿ ಖರೀದಿಸಿದ ವಸತಿ ಆಸ್ತಿ ಮೌಲ್ಯ ರೂ. 1.1 ಕೋಟಿ ರೂಪಾಯಿ. ಇದು ಸಾಮಾನ್ಯ ಆಸ್ತಿಯಾಗಿದ್ದು, ಇದರಲ್ಲಿ ಮೂವರು ಪಾಲು ಹೊಂದಿದ್ದಾರೆ.
ಆಸ್ತಿ ಘೋಷಣೆಗೆ ವಾಜಪೇಯಿ ಸ್ಫೂರ್ತಿ
ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಗಾಗಿ ಆಸ್ತಿಗಳನ್ನು ಬಹಿರಂಗಪಡಿಸುವ ಪ್ರಕ್ರಿಯೆಯನ್ನು 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಪರಿಚಯಿಸಿತ್ತು. ಅಂದಿನಿಂದ, ವಿವಿಧ ಹುದ್ದೆಗಳಲ್ಲಿರುವ ರಾಜಕಾರಣಿಗಳು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಈ ವಿವರಗಳನ್ನು ಪ್ರಮಾಣ ಪತ್ರದಲ್ಲಿ ಸೇರಿಸಲಾಗುತ್ತದೆ. ಲೋಕಾಯುಕ್ತ ಕಾಯ್ದೆ (2013) ಪ್ರಕಾರ, ಎಲ್ಲಾ ಸರ್ಕಾರಿ ನೌಕರರು ತಮ್ಮ ವಾರ್ಷಿಕ ಆದಾಯವನ್ನು ಬಹಿರಂಗಪಡಿಸಬೇಕಾಗುತ್ತದೆ.