ಅಯೋಧ್ಯೆ(ಉತ್ತರ ಪ್ರದೇಶ): ಭವ್ಯ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪಿಸುವ ಜನವರಿ 22ರಂದು ನಿಮ್ಮ ಮನೆಗಳಲ್ಲಿ 'ಶ್ರೀರಾಮ ಜ್ಯೋತಿ'ಯನ್ನು ಬೆಳಗಿಸಿ. ದೇಶಾದ್ಯಂತ ಅಂದು ದೀಪಾವಳಿ ಹಬ್ಬದಂತಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಮನವಿ ಮಾಡಿದ್ದಾರೆ.
22ನೇ ತಾರೀಖಿಗೆ ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ನಾವು ಸಾಕ್ಷಿಯಾಗಲಿದ್ದೇವೆ. ಆ ಅದೃಷ್ಟ ನಮಗೆ ಒಲಿದು ಬಂದಿದೆ. ದೇಶಕ್ಕಾಗಿ ಹೊಸ ಸಂಕಲ್ಪವನ್ನು ಮಾಡಬೇಕಿದೆ. ದೇಶದ 140 ಕೋಟಿ ಜನರು ಅಂದು ಮನೆಗಳಲ್ಲಿ ಶ್ರೀರಾಮದೀಪವನ್ನು ಬೆಳಗಿಸಿ, ದಿವ್ಯಜ್ಯೋತಿಯ ಬೆಳಕು ಮನೆಮನಗಳಲ್ಲಿ ಬೆಳಗಿಸಿ ಎಂದರು.
ಅಯೋಧ್ಯೆಯಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಇದಕ್ಕೂ ಮೊದಲು ಅವರು, ಹೊಸದಾಗಿ ನಿರ್ಮಿಸಲಾದ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ, ನವೀಕರಿಸಲಾದ ಅಯೋಧ್ಯೆ ಧಾಮ ರೈಲ್ವೆ ನಿಲ್ದಾಣ ಉದ್ಘಾಟಿಸಿ, 2 ಅಮೃತ್ ಭಾರತ್ ರೈಲುಗಳು ಮತ್ತು 6 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಜೊತೆಗೆ 15,700 ಕೋಟಿ ರೂ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿದರು.
ಸ್ವಾತಂತ್ರ್ಯ ಘೋಷಣೆಯ ದಿನ ಉದ್ಘಾಟನೆ: ಡಿಸೆಂಬರ್ 30 ಭಾರತಕ್ಕೆ ಎಂದಿಗೂ ಐತಿಹಾಸಿಕ ದಿನವಾಗಿದೆ. ಕಾರಣ 1943ರಲ್ಲಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರತದ ಧ್ವಜ ಹಾರಿಸಿ, ದೇಶ ಸ್ವಾತಂತ್ರ್ಯವಾಗಿದೆ ಎಂದು ಘೋಷಣೆ ಹೊರಡಿಸಿದ ದಿನ. ಇಂತಹ ಸುದಿನದಂದು ವಿಮಾನ, ರೈಲು ನಿಲ್ದಾಣವನ್ನು ಉದ್ಘಾಟಿಸಲಾಗಿದೆ. ಇತರ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು.
15 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಾಗಿದೆ. ಇವೆಲ್ಲವೂ ಆಧುನಿಕ ಅಯೋಧ್ಯೆಯನ್ನು ದೇಶದ ಭೂಪಟದಲ್ಲಿ ಅಚ್ಚಳಿಯದಂತೆ ಮಾಡಲಿವೆ. ಇಂದಿನ ಭಾರತ ಡಿಜಿಟಲ್ ತಂತ್ರಜ್ಞಾನದ ಜೊತೆಗೆ ಆಧ್ಯಾತ್ಮಿಕ ಚಿಂತನೆ ಮತ್ತು ತೀರ್ಥಕ್ಷೇತ್ರಗಳ ಸುಂದರಗೊಳಿಸುವ ಕಾರ್ಯವನ್ನೂ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಅಯೋಧ್ಯೆಯಿಂದಲೇ ಅಭಿವೃದ್ಧಿ ಶಕೆ: ಪ್ರಪಂಚದ ಯಾವುದೇ ದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಬೇಕಾದರೆ, ಅದು ತನ್ನ ಪರಂಪರೆಯ ಹಾದಿಯಲ್ಲೇ ಸಾಗಬೇಕು. ರಾಮಲಲ್ಲಾ ಟೆಂಟ್‌ನಲ್ಲಿದ್ದ. ಈಗ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದ್ದಾನೆ. ದೇಶ ಬಡತನವನ್ನು ಕೊಡವಿಕೊಂಡು ಅಭಿವೃದ್ಧಿ ಹೊಂದುವ ಹೊಸ ಶಕ್ತಿಯನ್ನು ಅಯೋಧ್ಯೆಯಿಂದಲೇ ಪಡೆದುಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಯೋಧ್ಯೆಯಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಇದು ರಾಜ್ಯಕ್ಕೂ ವಿಸ್ತರಿಸಲಿದೆ. ರಾಮನ ಭವ್ಯ ಮಂದಿರ ನಿರ್ಮಾಣವಾದ ನಂತರ ಇಲ್ಲಿಗೆ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಯೋಧ್ಯೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ ಎಂದರು.
ವಿಮಾನಕ್ಕೆ ವಾಲ್ಮೀಕಿ ಹೆಸರಿಗೆ ಸಂತಸ: ಅಯೋಧ್ಯಾ ಧಾಮ ರೈಲು ನಿಲ್ದಾಣ, ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿರುವುದು ಸಂತಸ ತಂದಿದೆ. ಮಹರ್ಷಿಗಳು ರಾಮಾಯಣ ಗ್ರಂಥದ ಮೂಲಕ ನಮಗೆ ಶ್ರೀರಾಮನ ಪರಿಚಯಿಸಿದರು ಎಂದು ಮೋದಿ ಹೇಳಿದರು.
ಇದನ್ನೂ ಓದಿ: ವರ್ಷದ ಕೊನೆಯ ಮೋದಿ 'ಮನ್ ಕಿ ಬಾತ್' ಇಂದು: 11 ಗಂಟೆಗೆ ಪ್ರಸಾರ