ನವದೆಹಲಿ: ಅಫ್ಘಾನಿಸ್ತಾನದ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಚ್ಚೆತ್ತುಕೊಂಡು ಭಾರತದ ನಾಗರಿಕರು, ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಭಾರತದ ನೀತಿಯನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್ ಪಕ್ಷವು ಭಾರತದ ಹಿತಾಸಕ್ತಿಗಳನ್ನು ರಕ್ಷಿಸಲು ದೃಢವಾಗಿ ನಿಂತಿದೆ ಮತ್ತು ಹಾಗೆ ಭಾರತ ಸರ್ಕಾರದಿಂದ ರಾಜತಾಂತ್ರಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಇಷ್ಟೆಲ್ಲಾ ಘಟನೆ ಹೊರತಾಗಿಯೂ ನರೇಂದ್ರ ಮೋದಿ ಸರ್ಕಾರದ ಮೌನವು ತುಂಬಾ ಗೊಂದಲಮಯವಾಗಿದೆ. ಮೋದಿ ಸರ್ಕಾರವು ನಮ್ಮ ನಾಗರಿಕರನ್ನು ಸ್ಥಳಾಂತರಿಸುವ ಉತ್ತಮ ಚಿಂತನೆಯ ಯೋಜನೆಯನ್ನು ಹೊಂದಲು ನಿರಾಕರಿಸುವುದು ಸ್ವೀಕಾರಾರ್ಹವಲ್ಲ ಎಂದು ಹರಿಹಾಯ್ದಿದ್ದಾರೆ.
ಹೆಚ್ಚಿನ ಓದಿಗೆ: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಗುಂಡಿನ ದಾಳಿಗೆ ಐವರು ಬಲಿ: ಪ್ರಾಣ ರಕ್ಷಿಸಿಕೊಳ್ಳಲು ಅಫ್ಘನ್ನರ ಪರದಾಟ
ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ಪಾಕಿಸ್ತಾನದ ISI ಮತ್ತು JeM, LeT, JuD ನೊಂದಿಗೆ ಸಂಪರ್ಕ ಇರುವುದು ಗೊತ್ತಿರುವ ವಿಷಯ. ಈ ಹಿನ್ನೆಲೆಯಲ್ಲಿ ನಮ್ಮ ಭೌಗೋಳಿಕ-ರಾಜಕೀಯ ಹಿತಾಸಕ್ತಿಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಮೇಲೆ ಅದರ ಪರಿಣಾಮವನ್ನು ಮರುಪರಿಶೀಲಿಸುವ ತುರ್ತು ಅವಶ್ಯಕತೆ ಇದೆ. ಮೋದಿ ಸರ್ಕಾರವು ಅದನ್ನು ಮರೆತುಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಅತ್ಯಂತ ನಿರ್ಣಾಯಕ ಸಮಯದಲ್ಲಿ ಮೋದಿ ಮೌನವು ಏನನ್ನೋ ಮುಚ್ಚಿಡುತ್ತಿದೆ ಎಂಬ ಆತಂಕವನ್ನು ಹುಟ್ಟುಹಾಕುತ್ತದೆ ಎಂದು ಸುರ್ಜೇವಾಲ ಸರ್ಕಾರದ ಬಗ್ಗೆ ಸಂಶಯ ಪಟ್ಟಿದ್ದಾರೆ.