ಬಿಲಾಸ್ಪುರ (ಛತ್ತೀಸ್ಗಢ): ಕಳೆದ ಒಂಬತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಸಾಕಷ್ಟು 'ಲೂಟಿ' ಮಾಡಿದೆ. ಇದರ ಪ್ರಮಾಣವು ಬ್ರಿಟಿಷರು ತಮ್ಮ ಆಡಳಿತದ 250 ವರ್ಷಗಳಲ್ಲಿ ಮಾಡಿದ ಲೂಟಿಯನ್ನೂ ಮೀರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ವರ್ಷಾಂತ್ಯದೊಳಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್‌ಗಢದ ಬಿಲಾಸ್ಪುರದಲ್ಲಿ ಭಾನುವಾರ ಸಾರ್ವಜನಿಕ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೋದಿ ಸರ್ಕಾರ ಒಂಬತ್ತು ವರ್ಷಗಳಲ್ಲಿ ದೇಶವನ್ನು ಲೂಟಿ ಮಾಡಿದೆ. ಬ್ರಿಟಿಷರು ತಮ್ಮ 250 ವರ್ಷಗಳಲ್ಲೂ ಇಷ್ಟು ಲೂಟಿ ಮಾಡಿಲ್ಲ. ಕಾಂಗ್ರೆಸ್ ಕೂಡ 75 ವರ್ಷಗಳಲ್ಲಿ ಇಷ್ಟು ಲೂಟಿ ಮಾಡಿಲ್ಲ ಎಂದರು.
ನಾನು ದೆಹಲಿಯಲ್ಲಿ ರೇವಿಡಿ (ಉಚಿತ ಯೋಜನೆಗಳು) ವಿತರಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ನನ್ನ ಮೇಲೆ ಕೋಪಗೊಂಡಿದ್ದಾರೆ. ಹೌದು, ಮೋದಿ ಜೀ ನಾನು ಉಚಿತ ಯೋಜನೆಗಳನ್ನು ಹಂಚುತ್ತಿದ್ದೇನೆ. ಆದರೆ, ನಿಮ್ಮ ಜನರು ಅದನ್ನು ಲೂಟಿ ಮಾಡಿ ಅವರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಾನು ಬಡವರ ಕೈಗೆ ಉಚಿತ ಯೋಚನೆಗಳನ್ನು ಕೊಟ್ಟರೆ ನೀವು ಯಾಕೆ ಚಿಂತೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ. ತರಕಾರಿ, ಹಾಲು, ಹಿಟ್ಟು ಎಲ್ಲವೂ ದುಬಾರಿಯಾಗಿದೆ. ಬೆಲೆ ಏಕೆ ಏರುತ್ತಿದೆ ಎಂದು ನೀವು (ಜನರು) ಎಂದಾದರೂ ಯೋಚಿಸಿದ್ದೀರಾ?. ಸ್ವಾತಂತ್ರ್ಯದ ನಂತರ ಮೋದಿ ಅವರು ಅಭೂತಪೂರ್ವ ತೆರಿಗೆಯನ್ನು ಹಾಕಿದ್ದಾರೆ. ಚಹಾ, ಕಾಫಿ, ಹಾಲು, ಎಣ್ಣೆ ಇತ್ಯಾದಿಗಳನ್ನೂ ಬಿಟ್ಟಿಲ್ಲ. ಬ್ರಿಟಿಷರು ಸಹ ಹಾಲು ಮತ್ತು ಇತರ ಅಗತ್ಯ ವಸ್ತುಗಳ ಮೇಲೆ ತೆರಿಗೆಯನ್ನು ವಿಧಿಸಲಿಲ್ಲ. ಸ್ವಾತಂತ್ರ್ಯದ ನಂತರ 75 ವರ್ಷಗಳಲ್ಲಿ ನಾವು ಆಹಾರ ವಸ್ತುಗಳ ಮೇಲೆ ತೆರಿಗೆ ನೋಡಿಲ್ಲ. ಇವರು (ಮೋದಿ) ಇಷ್ಟು ತೆರಿಗೆ ಸಂಗ್ರಹಿಸಿ ಯಾರಿಗೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೋದಿ ಅವರಿಗೆ 'ಸ್ನೇಹಿತರು' ಇದ್ದಾರೆ. ಮೋದಿಯವರು ತಮ್ಮ ಸ್ನೇಹಿತರ 11 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದಾರೆ. ಮೋದಿ ಜೀ ನೀವು ಹಾಲು ಮತ್ತು ಮಜ್ಜಿಗೆ ಮೇಲೆ ತೆರಿಗೆ ವಸೂಲಿ ಮಾಡುತ್ತಿದ್ದೀರಿ. ಆ ಸಂಪೂರ್ಣ ಹಣವನ್ನು ನಿಮ್ಮ ಸ್ನೇಹಿತರಿಗೆ ನೀಡುತ್ತಿದ್ದೀರಿ. 11 ಲಕ್ಷ ಕೋಟಿ ರೂಪಾಯಿ ಸಾಲವನ್ನು ಉಚಿತವಾಗಿ ಮನ್ನಾ ಮಾಡುತ್ತಿದ್ದೀರಿ ಎಂದು ಟೀಕಿಸಿದರು.
ಮೋದಿ ಒಂಬತ್ತು ವರ್ಷಗಳಲ್ಲಿ ದೇಶವನ್ನು ಹಾಳು ಮಾಡಿದ್ದಾರೆ. ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಲಾಭವಾಗಿದೆಯೇ?, ನೋಟು ಅಮಾನ್ಯೀಕರಣದ ನಂತರ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಕೊನೆಗೊಳ್ಳುತ್ತದೆ ಎಂದು ಮೋದಿ ಹೇಳಿದ್ದರು. ಇದು ನಡೆದಿದೆಯೇ?, ವಿದ್ಯಾವಂತರಾಗಿದ್ದರೆ ಅವರು ಎಂದಿಗೂ ನೋಟು ನಿಷೇಧವನ್ನು ಜಾರಿಗೆ ತರುತ್ತಿರಲಿಲ್ಲ ಎಂದು ಕೇಜ್ರಿವಾಲ್ ವಾಗ್ಬಾಣ ಬಿಟ್ಟರು.
ಒಳ್ಳೆಯ ರಾಜಕಾರಣಿಗಳು ಮತ್ತು ಒಳ್ಳೆಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಛತ್ತೀಸ್‌ಗಢಕ್ಕೆ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ಕಳೆದ 23 ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದ್ದರೆ, ರಾಜ್ಯದ ಪ್ರತಿಯೊಂದು ಕುಟುಂಬವೂ ಶ್ರೀಮಂತವಾಗುತ್ತಿತ್ತು. 24 ಗಂಟೆಗಳ ಕಾಲ ಉಚಿತ ವಿದ್ಯುತ್, ಅತ್ಯುತ್ತಮ ಶಾಲೆಗಳು ಮತ್ತು ಗುಣಮಟ್ಟದ ಶಿಕ್ಷಣ, ಉಚಿತ ಆರೋಗ್ಯ ಸೇವೆ, ಉಚಿತ ನೀರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವೃದ್ಧರಿಗೆ ಉಚಿತ ತೀರ್ಥಯಾತ್ರೆ ಸೌಲಭ್ಯ ಮತ್ತು ಯುವಕರಿಗೆ ಉದ್ಯೋಗ ಬೇಕಾದರೆ ಛತ್ತೀಸ್‌ಗಢದಲ್ಲಿ ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು.
ಇದನ್ನೂ ಓದಿ: Rahul Gandhi: ಕೆಸಿಆರ್ ರಿಮೋಟ್ ಕಂಟ್ರೋಲ್ ಮೋದಿ ಬಳಿ ಇದೆ.. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ