ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇರಳ, ಹೈದ್ರಾಬಾದ್ ಯೂನಿವರ್ಸಿಟಿ, ಜೆಎನ್ಯು ಬಳಿಕ ಈಗ ಕೋಲ್ಕತ್ತಾದಲ್ಲೂ ಪ್ರದರ್ಶಿಸಲಾಗಿದೆ. ಇಲ್ಲಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ‘ದಿ ಮೋದಿ ಕ್ವೆಶ್ಚನ್’ ಡಾಕ್ಯುಮೆಂಟರಿ ಪ್ರದರ್ಶನ ನಡೆಯುತ್ತಿತ್ತು. ವಿಷಯ ತಿಳಿದ ಆಡಳಿತ ಮಂಡಳಿ ವಿದ್ಯುತ್ ಸ್ಥಗಿತಗೊಳಿಸಿತು. ಇದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಕೂಡ ನಡೆಸಿದರು.
ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಬಿಬಿಸಿ ಚಿತ್ರಿಸಿರುವ ವಿವಾದಿತ ಗೋಧ್ರೋತ್ತರ ಗಲಭೆ ಸಾಕ್ಷ್ಯಚಿತ್ರವನ್ನು ಅನುಮತಿ ರಹಿತವಾಗಿ ಶುಕ್ರವಾರ ಸಂಜೆ 4 ಗಂಟೆಗೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಮುಖ್ಯ ಹಾಲ್ನಲ್ಲಿ ಪ್ರದರ್ಶನ ನಡೆಸಿದ್ದಾರೆ. ಇದರ ವಿರುದ್ಧ ಆಡಳಿತ ಮಂಡಳಿಗೆ ದೂರು ಹೋಗಿದೆ. ಬಳಿಕ ಹಾಲ್ಗೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿಸಲಾಗಿದೆ. ಇದು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.
ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿವಿಯ ಬೇರಡೆ ಹೊರತುಪಡಿಸಿ ಹಾಲ್ಗೆ ಮಾತ್ರ ಸಂಪರ್ಕ ಕಡಿತ ಮಾಡಿದ್ದು, ಅಸಮಾಧಾನಕ್ಕೆ ಕಾರಣವಾಗಿತ್ತು. ಮರು ಸಂಪರ್ಕಕ್ಕೆ ವಿದ್ಯಾರ್ಥಿಗಳೂ ಒತ್ತಾಯಿಸಿದ್ದಾರೆ. ಈ ವೇಳೆ ವಿವಿಯ ಡೀನ್‌ರಿಗೆ 20 ನಿಮಿಷ ಮುತ್ತಿಗೆ ಹಾಕಲಾಯಿತು. ವಿವಿಯಲ್ಲಿ ನಿಷೇಧಿಯ ಚಿತ್ರ ಪ್ರದರ್ಶನದಿಂದ ವಿವಾದ ಉಂಟಾದಲ್ಲಿ ಅದರ ಜವಾಬ್ದಾರಿ ವಿದ್ಯಾರ್ಥಿಗಳೇ ಹೊರಬೇಕು ಎಂದು ಷರತ್ತಿನ ಮೇಲೆ ವಿದ್ಯುತ್ ಮರು ಸಂಪರ್ಕ ನೀಡಲಾಯಿತು.
"ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ಕಾಲೇಜು ಕುಲಪತಿಗಳು ಮತ್ತು ಆಡಳಿತ ಮಂಡಳಿಗೆ ಅನುಮತಿ ಕೋರಿದ್ದೆವು. ಆದರೆ, ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಚಿತ್ರವನ್ನು ಪ್ರದರ್ಶಿಸಬಾರದು ಎಂದು ಹೇಳಿದರು. ಅನುಮತಿಗೆ ಪಟ್ಟುಹಿಡಿದಾಗ ಸಾಕ್ಷ್ಯಚಿತ್ರವನ್ನು ತೋರಿಸಿದರೆ, ಏನಾದರೂ ಪರಿಣಾಮ ಉಂಟಾದರೆ ಅದರ ಜವಾಬ್ದಾರಿ ವಿದ್ಯಾರ್ಥಿಗಳೇ ಹೊರಬೇಕು ಎಂದು ವಿವಿ ಅಧಿಕಾರಿಗಳು ನಮಗೆ ಷರತ್ತು ವಿಧಿಸಿದರು" ಎಂದು ಎಸ್‌ಎಫ್‌ಐ ಘಟಕದ ರಿಶಿವ್ ಸಹಾ ಹೇಳಿದರು.
ಬೇರೆ ವಿವಿಗಳಲ್ಲಿ ಪ್ರದರ್ಶನ: ಗುಜರಾತ್ನ ಗೋಧ್ರೊತ್ತರ ಗಲಭೆಯ ಕುರಿತಾಗಿ ಬ್ರಿಟನ್ ಆಂಗ್ಲ ಮಾಧ್ಯಮ ಬಿಬಿಸಿ ಚಿತ್ರಿಸಿರುವ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಸಾಕ್ಷ್ಯಚಿತ್ರವನ್ನು ದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ಯು)ದಲ್ಲಿ ಪ್ರದರ್ಶಿಸುತ್ತಿದ್ದಾಗ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ವಿವಾದಿತ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ, ಜೆಎನ್ಯುವಿನಲ್ಲಿ ವಿದ್ಯಾರ್ಥಿ ಒಕ್ಕೂಟವೊಂದು ಅನುಮತಿ ರಹಿತ ಪ್ರದರ್ಶನಕ್ಕೆ ಮುಂದಾಗಿತ್ತು. ಈ ವೇಳೆ ಕಲ್ಲು ತೂರಾಟ ನಡೆಸಿದ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದರು.
ಇಂಟರ್ನೆಟ್, ವಿದ್ಯುತ್ ಕಡಿತ: ಒಕ್ಕೂಟದ ಕೆಲವು ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಗಲಭೆಯ ಕುರಿತಾದ ಆಕ್ಷೇಪಾರ್ಹ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಬಯಸಿದ್ದರು. ಆದರೆ, ವಿವಿ ಆಡಳಿತ ಮಂಡಳಿ ಇದಕ್ಕೆ ಅನುಮತಿ ನಿರಾಕರಿಸಿತ್ತು. ಅಲ್ಲದೇ, ವಿವಿಯಲ್ಲಿ ಅಂತಹ ಚಟುವಟಿಕೆಗಳನ್ನು ನಡೆಸದಂತೆ ಸೂಚಿಸಿತ್ತು. ಹೀಗಿದ್ದರೂ ಕೆಲ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದರು. ಇದರಿಂದ ವಿವಿಯಲ್ಲಿ ಸಂಘರ್ಷ ಭುಗಿಲೇಳುವ ಕಾರಣ, ಇಂಟರ್ನೆಟ್ ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು.
ಕೇರಳದಲ್ಲಿ ಕಾಂಗ್ರೆಸ್ನಿಂದ ಪ್ರದರ್ಶನ: 2002ರಲ್ಲಿ ನಡೆದ ಗೋಧ್ರೋತ್ತರ ಗಲಭೆಯ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತದಾದ್ಯಂತ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಭಾರತದಲ್ಲಿ ಈ ಸಾಕ್ಷ್ಯ ಚಿತ್ರವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಗುರುವಾರ ವಿವಾದಾತ್ಮಕ ಸಾಕ್ಷ್ಯ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದೆ.
ಗುಜರಾತ್ ಹಿಂಸಾಚಾರ ಕುರಿತಾದ ಸಾಕ್ಷ್ಯ ಚಿತ್ರವನ್ನು ಮೊದಲು ನಮ್ಮ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಇಲ್ಲಿನ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರಿಗೆ ಪ್ರದರ್ಶಿಸಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಹೀಗಾಗಿ ನಾವು ಸಾರ್ವಜನಿಕವಾಗಿ ಪ್ರದರ್ಶನ ಏರ್ಪಡಿಸಿದೆವು. ಇದಕ್ಕೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಓದಿ: ಕೇರಳದಾದ್ಯಂತ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾದ ಕಾಂಗ್ರೆಸ್