ಬಾಲಿ (ಇಂಡೋನೇಷ್ಯಾ): ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಕದನ ವಿರಾಮ ಅಗತ್ಯ. ಈ ನಿಟ್ಟಿನಲ್ಲಿ ರಾಜತಾಂತ್ರಿಕ ಮಾರ್ಗಗಳನ್ನು ಬಳಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಇಂಧನ ಪೂರೈಕೆಯ ಮೇಲಿನ ನಿರ್ಬಂಧಗಳನ್ನೂ ವಿರೋಧಿಸಿದರು. ಮುಂದಿನ ವರ್ಷ ಬುದ್ಧ ಮತ್ತು ಗಾಂಧಿ ಬದುಕಿದ ಪವಿತ್ರ ನೆಲ ಭಾರತದಲ್ಲಿ ಜಿ20 ಶೃಂಭಸಭೆ ನಡೆದಾಗ ನಾವು ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡವೆವು ಎಂದು ಅವರು ಹೇಳಿದರು.
ಆಹಾರ ಮತ್ತು ಶಕ್ತಿ ಸುರಕ್ಷತೆ ಬಗ್ಗೆ ಮಾತನಾಡಿದ ಮೋದಿ, ಮೂಲಭೂತ ಸರಕುಗಳಿಗೆ ಪ್ರಪಂಚದಾದ್ಯಂತ ಬಿಕ್ಕಟ್ಟು ಎದುರಾಗಿದೆ. ಪ್ರತಿ ದೇಶದಲ್ಲಿ ಬಡ ಜನತೆ ಇದರಿಂದ ಸಾಕಷ್ಟು ಪರಿಣಾಮ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂಧನ ಪೂರೈಕೆಗೆ ಯಾವುದೇ ನಿರ್ಬಂಧ ವಿಧಿಸಬಾರದು. ಭಾರತವು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. 2030ರ ವೇಳೆಗೆ ಭಾರತ ಅರ್ಧದಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳ ಮೂಲಕ ಸಂಪಾದಿಸಲಿದೆ ಎಂದು ತಿಳಿಸಿದರು.
ಇನ್ನು ಉಕ್ರೇನ್ ಬಿಕ್ಕಟ್ಟನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಕದನ ವಿರಾಮ ಘೋಷಿಸಿ ರಾಜತಾಂತ್ರಿಕತೆಯ ಮೂಲಕ ದ್ವಿಪಕ್ಷೀಯ ಸಂಬಂಧವನ್ನು ಮರು ಸ್ಥಾಪಿಸಬೇಕು. ಕಳೆದ ಶತಮಾನದಲ್ಲಿ ಎರಡನೇ ಮಹಾಯುದ್ಧ ಜಗತ್ತಿಗೆ ಸಾಕಷ್ಟು ಹಾನಿ ಮಾಡಿದೆ. ಇದಾದ ಬಳಿಕ ನಾಯಕರುಗಳು ಶಾಂತಿ ಹಾದಿಗೆ ಮರಳಲು ಸಾಕಷ್ಟು ಗಂಭೀರ ಪ್ರಯತ್ನ ನಡೆಸಿದ್ದಾರೆ. ಈಗ ನಮ್ಮ ಸಮಯ. ಕೋವಿಡ್ ಬಳಿಕ ಹೊಸ ಜಗತ್ತನ್ನು ಸೃಷ್ಟಿಸುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.
ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ರಷ್ಯಾ ವಿದೇಶಾಂಗ ಮಂತ್ರಿ ಸೆರ್ಗೆ ಲರ್ವೊ ಸೇರಿದಂತೆ ಉಳಿದ ದೇಶಗಳ ನಾಯಕರು ಭಾಗಿಯಾಗಿದ್ದಾರೆ.
ಇದನ್ನೂ ಓದಿ: G20 ಶೃಂಗಸಭೆ: ಗಮನ ಸೆಳೆದ ಯುಕೆ ಪ್ರಧಾನಿ ಸುನಕ್, ಪ್ರಧಾನಿ ಮೋದಿ ಭೇಟಿ