ನ್ಯೂಯಾರ್ಕ್: ಅಮೆರಿಕ ಕೊರೊನಾ ಲಸಿಕೆಯನ್ನು ಸಾಮೂಹಿಕವಾಗಿ ನೀಡುವ ಐತಿಹಾತಿಕ ಅಭಿಯಾನ ಆರಂಭಿಸಿದೆ. ಸದ್ಯಕ್ಕೆ ಮೊಡೆರ್ನಾ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ ವ್ಯಾಕ್ಸಿನ್ ನೀಡಲು ಮುಂದಾಗಿದೆ.
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಕೋವಿಡ್ ಲಸಿಕೆಯ ಸುರಕ್ಷತೆ ಹಾಗೂ ಪರಿಣಾಮದ ಪ್ರಾಥಮಿಕ ವಿಶ್ಲೇಷಣಾ ವರದಿಯನ್ನು ನೀಡಿದ್ದು, ಆರೋಗ್ಯದ ತುರ್ತಿನ ವೇಳೆ ಇದನ್ನು ಬಳಸಿಕೊಳ್ಳಬಹುದು ಎಂದು ಶೀಘ್ರದಲ್ಲಿ ಅನುಮತಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಮೊಡೆರ್ನಾ ಲಸಿಕೆ ಮತ್ತೊಂದು ಕೊರೊನಾ ಲಸಿಕೆಯಾದ ಫಿಜರ್‌ನ ತಂತ್ರಜ್ಞಾನವನ್ನು ಆಧರಿಸಿದೆ. ಈ ತಂತ್ರಜ್ಞಾನದಲ್ಲಿ ಲಸಿಕೆ ಕೋವಿಡ್ -19 ವೈರಸ್‌ನ ಮೇಲ್ಮೈಯಲ್ಲಿರುವ ಪ್ರೋಟೀನ್ ಅನ್ನು ಗುರುತಿಸಲು ದೇಹದ ರೋಗ ನಿರೋಧಕ ವ್ಯವಸ್ಥೆಗೆ ತರಬೇತಿ ನೀಡಲಿದೆ. ಸೋಂಕಿನ ವೈರಸ್ ದೇಹಕ್ಕೆ ಬಂದಾಗ ಅದನ್ನು ಎದುರಿಸುವ ಕೆಲಸವನ್ನು ಈ ಲಸಿಕೆ ಮಾಡಲಿದೆ.
ಓದಿ: ಮೊಡೆರ್ನಾದಿಂದ ಹೆಚ್ಚುವರಿ 100 ಮಿಲಿಯನ್ ಕೋವಿಡ್ -19 ಲಸಿಕೆ ಖರೀದಿಸಲು ಮುಂದಾದ ಯುಎಸ್
ಈ ಮೊದಲು ಮೊಡೆರ್ನಾ ಲಸಿಕೆ ಪ್ರಯೋಗ ಮಾಡುವ ವೇಳೆ ನಿರ್ದಿಷ್ಟ ಸುರಕ್ಷತೆ ಇಲ್ಲ ಎಂದು ಆಹಾರ ಮತ್ತು ಔಷಧ ಮಂಡಳಿ ಹೇಳಿತ್ತು. ಇದರ ಜೊತೆಗೆ ಅಲರ್ಜಿಯಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದೆಂದು ಎಚ್ಚರಿಕೆಯನ್ನು ನೀಡಿತ್ತು. ತಾತ್ಕಾಲಿಕ ಜ್ವರ, ಆಯಾಸ ಕೂಡಾ ಬರಬಹುದೆಂಬ ಮಾಹಿತಿ ನೀಡಿತ್ತು.
ಫೈಜರ್ ಲಸಿಕೆಯಲ್ಲೂ ಕೂಡಾ ಇದೇ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಲಸಿಕೆ ಪಡೆದ ಶೇಕಡಾ 1.5ರಷ್ಟು ಮಂದಿ ಈ ವ್ಯಾಕ್ಸಿನ್ ಅನ್ನು ಅತಿ ಸೂಕ್ಷ್ಮ ಎಂದು ಹೇಳಿಕೆ ನೀಡಿದ್ದರು. ಇದಾದ ನಂತರ ಮೊಡೆರ್ನಾ ವ್ಯಾಕ್ಸಿನ್ ಅನ್ನು ಮಧ್ಯಂತರ ವಿಶ್ಲೇಷಣೆ ನಂತರ ಶೇಕಡಾ 94ರಷ್ಟು ಪರಿಣಾಮಕಾರಿ ಹಾಗೂ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಶೇಕಡಾ 86ರಷ್ಟು ಪರಿಣಾಮಕಾರಿ ಎಂದು ಮೊಡೆರ್ನಾ ಸಂಸ್ಥೆ ಹೇಳಿಕೊಂಡಿದೆ.