ಲಖನೌ(ಉತ್ತರಪ್ರದೇಶ): ಉತ್ತರಪ್ರದೇಶದಲ್ಲಿ ಚುನಾವಣೆ ಘೋಷಣೆಯಾದ ಬಳಿಕ ಆಡಳಿತಾರೂಢ ಬಿಜೆಪಿಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ. ಕಳೆದ ಮೂರು ದಿನದಲ್ಲಿ ಇಬ್ಬರು ಸಚಿವರು ಮತ್ತು ಐವರು ಶಾಸಕರು ಬಿಜೆಪಿ ತೊರೆದಿದ್ದಾರೆ. ಇದು ಪಕ್ಷಕ್ಕೆ ಚುನಾವಣೆ ಹೊತ್ತಲ್ಲಿ ಭಾರಿ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಲಾಗ್ತಿದೆ.
ಒಬಿಸಿ ಸಮುದಾಯದ ಪ್ರಭಾವಿಗಳಾದ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಮತ್ತು ಬಿಜೆಪಿಗೆ ಶಾಕ್ ನೀಡಿದ್ದರು. ಇದೀಗ ಅವರನ್ನೇ ಹಿಂಬಾಲಿಸಿರುವ ಮತ್ತೊಬ್ಬ ಶಾಸಕ ಫಿರೋಜಾಬಾದ್ ಜಿಲ್ಲೆಯ ಶೀಕೋಹಾಬಾದ್ ಕ್ಷೇತ್ರದ ಎಂಎಲ್ಎ ಮುಕೇಶ್ ವರ್ಮಾ ಪಕ್ಷಕ್ಕೆ ಗುಡ್ಬೈ ಹೇಳಿದ್ದಾರೆ.
ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಒಬಿಸಿ ಸಮುದಾಯದ ನಾಯಕರು. ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸುತ್ತೇವೆ. ಹೀಗಾಗಿ ನಾನೂ ಕೂಡ ಪಕ್ಷ ತೊರೆಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ಪಕ್ಷ ತೊರೆಯಲಿದ್ದಾರೆ ಎಂಬ ಮಾತನ್ನು ಶಾಸಕ ಮುಕೇಶ್ ವರ್ಮಾ ಹೇಳಿದ್ದಾರೆ.
ಬಿಜೆಪಿ ತೊರೆದ ಎಲ್ಲಾ ನಾಯಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುವುದು ಪಕ್ಕಾ ಆಗಿದೆ. ಉತ್ತರಪ್ರದೇಶದಲ್ಲಿ ಭಾರಿ ಜಿದ್ದಾಜಿದ್ದಿನ ಚುನಾವಣೆ ಏರ್ಪಡುವುದು ಈ ಮೂಲಕ ಗೋಚರವಾಗುತ್ತಿದೆ.
ಇದನ್ನೂ ಓದಿ: 60 ಅಧಿಕಾರಿಗಳು ಸೇರಿದಂತೆ 370 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸಂಕಟ.. ಮುಂಬೈ ಇಲಾಖೆಯಲ್ಲೇ ದಾಖಲೆ ಸಾವು!