ಛತ್ತೀಸ್‌ಗಢ: ದುರ್ಗ್‌ನ ಶಾಸಕ ಅರುಣ್ ವೋರಾ ಅವರು ಕ್ರಿಕೆಟ್ ಆಡುತ್ತಿದ್ದಾಗ ಮಹಿಳಾ ಆಟಗಾರ್ತಿಯ ಮುಖಕ್ಕೆ ಚೆಂಡು ಬಂದು ತಾಕಿದ್ದು, ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.
ಬುಧವಾರ ಪದ್ಮನಾಭ್‌ಪುರ ಕ್ರೀಡಾಂಗಣದಲ್ಲಿ ದುರ್ಗ್ ವಿಶ್ವವಿದ್ಯಾಲಯದ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದುರ್ಗ್‌ನ ಶಾಸಕ ಅರುಣ್ ವೋರಾ ಅವರನ್ನು ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗಿತ್ತು. ವೋರಾ ಅವರು ಕ್ರಿಕೆಟ್ ಆಡುವಾಗ ಫೋಟೋಗಳನ್ನು ಕ್ಲಿಕ್ಕಿಸುವ ಬಯಕೆ ವ್ಯಕ್ತಪಡಿಸಿದರು. ಶಾಸಕರು ಬ್ಯಾಟಿಂಗ್ ಮಾಡುವಾಗ ಮಹಿಳಾ ಆಟಗಾರ್ತಿಯೊಬ್ಬರು ಬೌಲ್ ಮಾಡಿದರು.
ಮಹಿಳಾ ಕ್ರಿಡಾಪಟು ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದಾಗ, ಉತ್ಸುಕರಾದ ಶಾಸಕರು ತಮ್ಮ ಬ್ಯಾಟ್ ಅನ್ನು ಪೂರ್ಣ ವೇಗದಲ್ಲಿ ಬೀಸಿದರು. ಚೆಂಡು ನೇರವಾಗಿ ವಿಕೆಟ್ ಸಮೀಪ ನಿಂತಿದ್ದ ಮಹಿಳಾ ಆಟಗಾರ್ತಿಯ ಮುಖಕ್ಕೆ ಬಡಿದು, ಆಕೆ ಕುಸಿದು ಬಿದ್ದಳು. ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದಂತೆ ಶಾಕ್ ಆದ ಶಾಸಕರು, ಬಳಿಕ ತಮ್ಮ ವಾಹನದಲ್ಲಿಯೇ ಗಾಯಳುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಬಳಿಕ ಅವರಿಗೆ ಐದು ಹೊಲಿಗೆ ಹಾಕಲಾಗಿದ್ದು, ಎರಡು ಹಲ್ಲುಗಳು ಮುರಿದಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ 500 ಸಿಕ್ಸರ್.. ಕ್ರಿಸ್ಗೇಲ್ ದಾಖಲೆ ಮುರಿಯಲು ಬೇಕು 51 ಸಿಕ್ಸರ್
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರುಣ್ ವೋರಾ, "ಮಹಿಳಾ ಆಟಗಾರ್ತಿಯೊಬ್ಬರು ಕ್ರಿಕೆಟ್ ಆಡುತ್ತಿದ್ದಾಗ ಚೆಂಡಿನ ಹೊಡೆತಕ್ಕೆ ಸಿಲುಕಿ ಗಾಯಗೊಂಡಿದ್ದರು. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು" ಎಂದು ಹೇಳಿದ್ದಾರೆ.