ನಿಜಾಮಾಬಾದ್(ತೆಲಂಗಾಣ): ಮಾರ್ಫಿಂಗ್ ವಿಡಿಯೋಗಳ ಮೂಲಕ ಸೈಬರ್ ಅಪರಾಧಿಗಳ ಬೆದರಿಕೆ ದಿನೇದಿನೇ ಹೆಚ್ಚುತ್ತಿದೆ. ಇದರಿಂದ ಭಯಗೊಂಡಿರುವ ಸಂತ್ರಸ್ತರು ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದಾರೆ. ಸೈಬರ್ ಕ್ರಿಮಿನಲ್‌ಗಳು ಅಮಾಯಕರಿಗೆ ಅಪಾರ ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತಿದ್ದಾರೆ. ಮಾತ್ರವಲ್ಲ, ಅಮೂಲ್ಯ ಪ್ರಾಣಗಳನ್ನೂ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇಂಥದೇ ಪ್ರಕರಣದಲ್ಲಿ ಕಿರುಕುಳ ತಡೆಯಲಾರದೆ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ, ನಿಜಾಮಾಬಾದ್ ನಗರ ಕ್ಷೇತ್ರದ ಅಭ್ಯರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸರ ಪ್ರಕಾರ, ನಿಜಾಮಾಬಾದ್ ಜಿಲ್ಲಾ ಕೇಂದ್ರದ ಸಾಯಿನಗರದ ನಿವಾಸಿ ಕನ್ನಯ್ಯ ಗೌಡ (35) ಸಗಟು ತರಕಾರಿ ವ್ಯಾಪಾರ ಮಾಡಿಕೊಂಡು ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು. ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ನಿಜಾಮಾಬಾದ್ ನಗರ ಕ್ಷೇತ್ರದಿಂದ ಅಲಯನ್ಸ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪಕ್ಷದ ಪರವಾಗಿ ಕಣಕ್ಕಿಳಿದಿದ್ದರು. ಇತ್ತೀಚೆಗಷ್ಟೇ ಅಪರಿಚಿತ ದುಷ್ಕರ್ಮಿಗಳು ಅವರ ಮೊಬೈಲ್ ಹ್ಯಾಕ್ ಮಾಡಿದ್ದರು. ದಾಳಿಕೋರರು ಸಂತ್ರಸ್ತನ ಫೋಟೋಗಳನ್ನು ಬದಲಾಯಿಸಿ ಅವರ ಫೋನ್‌ಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾರೆ. ಹಣ ಕಳುಹಿಸದಿದ್ದರೆ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹಲವು ಬಾರಿ ಬೆದರಿಕೆ ಹಾಕಿದ್ದರು.
ಇದರಿಂದ ಮನನೊಂದು, ಯಾರಿಗೂ ಹೇಳಲಾಗದೆ ಕನ್ನಯ್ಯಗೌಡ ಭಾನುವಾರ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕನ್ನಯ್ಯಗೌಡ ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿದ್ದರು. ಇನ್ನೆರಡು ದಿನಗಳಲ್ಲಿ ಗೃಹ ಪ್ರವೇಶ ಕಾರ್ಯಕ್ರಮವಿತ್ತು. ಇದೇ ವೇಳೆ ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಹಾಗೂ ಸಂಬಂಧಿಕರು ಅಳಲು ತೋಡಿಕೊಂಡರು. ಕನ್ನಯ್ಯಗೌಡ ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಕನ್ನಯ್ಯ ಫೋನ್ ಹ್ಯಾಕ್ ಮಾಡಿರುವ ಸೈಬರ್ ಕ್ರಿಮಿನಲ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಆತ್ಮಹತ್ಯೆಗೆ ಕಾರಣವೇನು ಎಂದು ವಿಚಾರಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಅಭ್ಯರ್ಥಿಯ ಮೊಬೈಲ್ ಫೋನ್ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸೈಬರ್ ಅಪರಾಧಿಗಳು ಬೆದರಿಸಿದ್ದೇಕೆ, ಅವರ ಫೋನ್‌ಗೆ ಯಾವ ರೀತಿಯ ಸಂದೇಶಗಳು ಬಂದಿವೆ, ಹಣ ನೀಡಿದ್ದರಾ? ಎಂಬ ವಿಷಯಗಳೂ ಸೇರಿದಂತೆ ಹಲವು ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ನಿಜಾಮಾಬಾದ್ ನಾಲ್ಕನೇ ಪೊಲೀಸ್ ಠಾಣೆ ಎಸ್‌ಎಚ್‌ಒ ಸಂಜೀವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿದ್ಯುತ್ ತಂತಿ ತುಳಿದು ತಾಯಿ-ಮಗಳು ಸಾವು ಪ್ರಕರಣ: ಬೆಸ್ಕಾಂನ ಐವರು ಸಿಬ್ಬಂದಿ ಅಮಾನತು