ಚೆನ್ನೈ (ತಮಿಳುನಾಡು) : ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಅಭ್ಯರ್ಥಿಯಾಗಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಎಡಪ್ಪಾಡಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಈ ಕ್ಷೇತ್ರದಿಂದ ಪಳನಿಸ್ವಾಮಿ ಏಳನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಈವರೆಗೆ ಇವರು ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಎಡಪ್ಪಡಿಯಲ್ಲಿ ಮುಖ್ಯಮಂತ್ರಿಯ ವಿರುದ್ಧ ಟಿ ಸಂಪತ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ.
ಹಾಗೆಯೇ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಕೂಡ ಇಂದು ಕೊಲತೂರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಕೊಲತೂರ್‌ನಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ನಾಮನಿರ್ದೇಶನ ಪ್ರಕ್ರಿಯೆಯ ನಂತರ ಸ್ಟಾಲಿನ್ ತಮ್ಮ ಕ್ಷೇತ್ರದಲ್ಲಿ ರ್ಯಾಲಿ ನಡೆಸಿದರು.
ಇನ್ನು, ಅಮ್ಮ ಮಕ್ಕಲ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಕೋವಿಲ್ಪಟ್ಟಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು ಮತ್ತು ಅವರ ಎದುರಾಳಿ ಎಐಎಡಿಎಂಕೆ ಸಚಿವ ಕಡಂಬೂರ್ ರಾಜು ಕೂಡ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ. ತಮಿಳುನಾಡು ವಿಧಾನಸಭೆಯಲ್ಲಿ 234 ಸ್ಥಾನಗಳಿದ್ದು, ಎಐಎಡಿಎಂಕೆ ಬಿಜೆಪಿಯೊಂದಿಗಿನ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಎಂ ಕೆ ಸ್ಟಾಲಿನ್‌ರ ಡಿಎಂಕೆ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಈ ಬಾರಿ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀತಿ ಮಯ್ಯಂ (ಎಂಎನ್‌ಎಂ) ಕೂಡ ಕಣದಲ್ಲಿರಲಿದೆ. ಕಾಂಗ್ರೆಸ್ ರಾಜ್ಯದಲ್ಲಿ 25 ಸ್ಥಾನಗಳಿಗೆ ಸ್ಪರ್ಧಿಸಲಿದೆ.