ನವದೆಹಲಿ : ರಾಷ್ಟ್ರೀಯ ಮುಕ್ತ ಶಿಕ್ಷಣ ಸಂಸ್ಥೆ (ಎನ್‌ಐಒಎಸ್) ಭಗವದ್ಗೀತೆ ಮತ್ತು ರಾಮಾಯಣವನ್ನು ಮದರಸಾಗಳಲ್ಲಿ ಪರಿಚಯಿಸಲಿದೆ ಎಂಬ ಮಾಧ್ಯಮ ವರದಿ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯ ಅಂಗವಾಗಿ 3, 5 ಮತ್ತು 8 ನೇ ತರಗತಿಗಳಿಗೆ 100 ಮದ್ರಸಗಳಲ್ಲಿ ಪ್ರಾಚೀನ ಭಾರತೀಯ ಜ್ಞಾನ ಮತ್ತು ಪರಂಪರೆಯ ಹೊಸ ಪಠ್ಯಕ್ರಮವನ್ನು ಎನ್‌ಐಒಎಸ್ ಪರಿಚಯಿಸಲಿದೆ ಎಂದು ದಿನ ಪತ್ರಿಕೆಯೊಂದು ವರದಿ ಮಾಡಿತ್ತು. ಇದು ಸತ್ಯಕ್ಕೆ ದೂರವಾದ ದುರುದ್ದೇಶಪೂರಿತ ವರದಿ ಎಂದು ಇದೀಗ ಶಿಕ್ಷಣ ಸಚಿವಾಲಯ ಹೇಳಿದೆ.
ಮಾರ್ಚ್ 3,2021 ರಂದು ರಾಷ್ಟ್ರೀಯ ಆಂಗ್ಲ ಪತ್ರಿಕೆಯಲ್ಲಿ 'ಎನ್‌ಐಒಎಸ್ ಟು ಟೇಕ್ ಗೀತಾ, ರಾಮಾಯಣ ಟು ಮದ್ರಸಾಸ್' (ಮದರಸಾಗಳಲ್ಲಿ ಎನ್‌ಐಒಎಸ್ ಗೀತಾ, ರಾಮಾಯಣವನ್ನು ಪರಿಚಯಿಸಲಿದೆ) ಎಂಬ ವರದಿ ಪ್ರಕಟಗೊಂಡಿತ್ತು.
ಸುಮಾರು 5 ಸಾವಿರ ವಿದ್ಯಾರ್ಥಿಗಳನ್ನೊಳಗೊಂಡ 100 ಮದರಸಾಗಳು ಎನ್‌ಐಒಎಸ್ ಮಾನ್ಯತೆ ಪಡೆದಿವೆ. ಬೇಡಿಕೆಯ ಮೇರೆಗೆ ಶೀಘ್ರದಲ್ಲೇ ಸುಮಾರು 500 ಮದರಸಾಗಳಿಗೆ ಎನ್‌ಐಒಎಸ್ ಮಾನ್ಯತೆ ನೀಡುವ ಯೋಜನೆಯಿದೆ ಎಂದು ಸರ್ಕಾರ ಹೇಳಿದೆ.