ಸಿಲಿಗುರಿ(ಪಶ್ಚಿಮ ಬಂಗಾಳ): ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಮತ್ತೊಮ್ಮೆ ಕಲ್ಲು ತೂರಾಟ ನಡೆಸಿದ ಘಟನೆ ಸಿಲಿಗುರಿಯಿಂದ ವರದಿಯಾಗಿದೆ. ಶುಕ್ರವಾರ ರಾತ್ರಿ ಘಟನೆ ನಡೆದಿದೆ. ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚುಯಲ್ ಆಗಿ ಉದ್ಘಾಟನೆ ಮಾಡಿದ್ದರು. ಪದೇ ಪದೇ ರೈಲಿನ ಮೇಲೆ ದಾಳಿ ನಡೆಸಲಾಗುತ್ತಿದ್ದು, ಈಗ 5ನೇ ಬಾರಿ ಕಲ್ಲು ತೂರಾಟ ನಡೆದಿದೆ. ಈ ಹಿಂದೆ ಮಾಲ್ಡಾ, ಬೋಲ್ಪುರ್ ಮತ್ತು ಬಿಹಾರದಲ್ಲಿ ವಂದೇ ಭಾರತ್ ರೈಲಿನ ಮೇಲೆ ದಾಳಿ ನಡೆಸಲಾಗಿತ್ತು.
ಇಂತಹ ಘಟನೆಗಳ ಬಗ್ಗೆ ರೈಲ್ವೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ವಂದೇ ಭಾರತ್ ರೈಲಿನಲ್ಲಿ ಹಲವು ದಾಳಿಗಳ ನಂತರ ಆರ್‌ಪಿಎಫ್ ಮತ್ತು ಜಿಆರ್‌ಪಿಯಿಂದ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಅಲ್ಲದೇ, ವಂದೇ ಭಾರತ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಬಿಹಾರದ ಇಬ್ಬರು ಅಪ್ರಾಪ್ತರನ್ನು ಪೋರ್ಟಿಯಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರೈಲ್ವೆ ಮೂಲಗಳ ಪ್ರಕಾರ ಈ ಬಾರಿ ದಾಳಿ ನಡೆದಿರುವುದು ಬಿಹಾರದಲ್ಲಿ. ಶುಕ್ರವಾರ ಸಂಜೆ 4:25ಕ್ಕೆ ದಲ್ಖೋಲಾ ಮತ್ತು ಟೆಲ್ಟಾ ನಡುವೆ ಸಂಚಾರ ಮಾಡುತ್ತಿದ್ದ ರೈಲಿಗೆ ಕಲ್ಲು ತೂರಲಾಗಿದೆ. C06 ಕಂಪಾರ್ಟ್‌ಮೆಂಟ್‌ನ ಆಸನ ಸಂಖ್ಯೆ 70ರಲ್ಲಿ ಕುಳಿತ ಪ್ರಯಾಣಿಕರೊಬ್ಬರು ಈ ಬಗ್ಗೆ ರೈಲು ಭದ್ರತಾ ಸಿಬ್ಬಂದಿಗೆ ತಿಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ದೂರು ದಾಖಲು: ಬಳಿಕ ರೈಲಿನ ಉಸ್ತುವಾರಿ ಹೊತ್ತಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಉನ್ನತ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ತನಿಖೆಗಾಗಿ ದಲ್ಖೋಲಾ ಆರ್‌ಪಿಎಫ್ ಮತ್ತು ಬಲರಾಂಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಸ್ವೀಕರಿಸಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡೇ ಹೇಳಿದ್ದಾರೆ.
ಮುಂದುವರಿದ ತನಿಖೆ: ಜಿಆರ್‌ಪಿ(ರೈಲ್ವೆ ಪೊಲೀಸ್ ಇಲಾಖೆ) ಅಧೀಕ್ಷಕ ಎಸ್. ಸೆಲ್ವಮುರುಗನ್ ಮಾತನಾಡಿ, 'ದೂರು ದಾಖಲಾಗಿದೆ. ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರೈಲ್ವೆ ಮೂಲಗಳ ಪ್ರಕಾರ ರೈಲಿನೊಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಆ ಸಮಯದಲ್ಲಿ ರೈಲು ಇದ್ದ ಸ್ಥಳೀಯ ಪೊಲೀಸ್ ಠಾಣೆಯ ಸಹಾಯದಿಂದ ಆರ್‌ಪಿಎಫ್ ತನಿಖೆ ನಡೆಸಲಿದೆ' ಎಂದು ಮಾಹಿತಿ ನೀಡಿದ್ದಾರೆ.
ಈ ಮೊದಲು ಪಶ್ಚಿಮ ಬಂಗಾಳದಲ್ಲಿ ಇಂತಹುದ್ದೇ ಘಟನೆಗಳು ವರದಿಯಾಗಿದ್ದವು. ಈ ವಿಚಾರ ಟಿಎಂಸಿ ಹಾಗೂ ಬಿಜೆಪಿ ನಾಯಕರ ಮಾತಿನ ಚಕಮಕಿಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಈ ಬಗ್ಗೆ ಸ್ವತಃ ಹೇಳಿಕೆ ನೀಡಿದ ಸಿಎಂ ಮಮತಾ ಬ್ಯಾನರ್ಜಿ ನಮ್ಮ ರಾಜ್ಯದಲ್ಲಿ ಕಲ್ಲು ತೂರಾಟದ ಘಟನೆಗಳೇ ನಡೆದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು.
ವಿಶಾಖಪಟ್ಟಣಂನಲ್ಲೂ ಕಲ್ಲು ತೂರಾಟ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇತ್ತೀಚೆಗೆ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ಅನೂಪ್ ಕುಮಾರ್ ಸೇತುಪತಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ವಂದೇ ಭಾರತ್ ರೈಲು ನಿರ್ವಹಣೆ ಮತ್ತು ಪ್ರಾಯೋಗಿಕ ಚಾಲನೆಗಾಗಿ ವಿಶಾಖಪಟ್ಟಣಂ ತಲುಪಿದಾಗ ಕೆಲವು ಅಪರಿಚಿತ ವ್ಯಕ್ತಿಗಳು ಅದರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ವಿಶಾಖಪಟ್ಟಣಂನಲ್ಲೂ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ: ಲಕ್ಷ ಲಕ್ಷ ಮೌಲ್ಯದ ಕಿಟಕಿಗಳಿಗೆ ಹಾನಿ!