ನವದೆಹಲಿ: ಉತ್ತರ-ಪಶ್ಚಿಮ ದೆಹಲಿಯ ಮುಖರ್ಜಿ ನಗರ ಠಾಣೆ ವ್ಯಾಪ್ತಿಯಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾನೆ.
ಬಾಲಕ ರಕ್ತಸಿಕ್ತ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಿದ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಿಸಿಆರ್ ವ್ಯಾನ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುವನ್ನು ಜಹಾಂಗೀರ್‌ಪುರಿಯಲ್ಲಿರುವ ಬಿಜೆಆರ್‌ಎಂ ಆಸ್ಪತ್ರೆಗೆ ದಾಖಲಿಸಿದೆ. ಸಂತ್ರಸ್ತನ ಹೇಳಿಕೆಯ ಆಧಾರದ ಮೇಲೆ ತನಿಖೆ ನಡೆಸುತ್ತಿರುವ ಪೊಲೀಸರು, ಕೊಲೆ ಯತ್ನದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿ ಬಾಲಕರನ್ನು ಬಂಧಿಸಲಾಗಿದೆ. ಇತರರಿಗಾಗಿ ಶೋಧ ನಡೆಯುತ್ತಿದೆ.
ಈ ಘಟನೆ ಡಿಸೆಂಬರ್ 21 ರ ರಾತ್ರಿ ನಡೆದಿದೆ. ಗಾಯಾಳು ಬಾಲಕ ಮುಖರ್ಜಿ ನಗರ ಪ್ರದೇಶದ ಪಿಜಿಯಲ್ಲಿ ವಾಸವಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈತ ಡೇಟಿಂಗ್ ಆ್ಯಪ್ ಮೂಲಕ ಹುಡುಗನೊಬ್ಬನ ಜೊತೆ ಸ್ನೇಹ ಬೆಳೆಸಿದ್ದ. ಇಬ್ಬರ ನಡುವೆ ನಿರಂತರ ಚಾಟಿಂಗ್ ನಡೆಯುತ್ತಿತ್ತು. ಮತ್ತೊಬ್ಬ ಬಾಲಕ ಕೂಡ ಮುಖರ್ಜಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆತ ಕರೆದಿದ್ದಕ್ಕೆ ಸಂತ್ರಸ್ತ ಬಾಲಕ ಆತನ ಮನೆಗೆ ಹೋಗಿದ್ದ.
ಆದರೆ ಅಲ್ಲಿ ಮೊದಲೇ ಮೂರ್ನಾಲ್ಕು ಹುಡುಗರು ಜಮಾಯಿಸಿ ಪಾರ್ಟಿ ಮಾಡುತ್ತಿದ್ದರು. ಅವರೆಲ್ಲರೂ ಸೇರಿ ಸಂತ್ರಸ್ತನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಆಗ ಬಾಲಕ ವಿರೋಧಿಸಿದ್ದಾನೆ. ಕಿರುಕುಳ ಹೆಚ್ಚಾದಾಗ ಆತ ಮಹಡಿಯಿಂದ ಕೆಳಗಿಳಿದು ಬರಲಾರಂಭಿಸಿದ್ದಾನೆ. ಆದರೆ ಅಲ್ಲಿನ ಹುಡುಗರು ದಾರಿ ಬಿಟ್ಟಿಲ್ಲ. ಇದರಿಂದ ದಾರಿ ಕಾಣದೆ ಬಾಲಕ ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ. ಗಾಯಾಳು ಬಾಲಕನ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಡೇಟಿಂಗ್ ಆ್ಯಪಲ್ಲಿ ಪರಿಚಯವಾದ ಯುವತಿಗೆ ಮನಸೋತು 6 ಕೋಟಿ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್..!