ಪುಣೆ(ಮಹಾರಾಷ್ಟ್ರ): ಈ ಕಾಲ ಘಟ್ಟವನ್ನು ಮೊಬೈಲ್ ದುನಿಯಾ ಎಂದು ಕರೆದರೂ ತಪ್ಪಾಗಲಾರದು. ಯಾವುದೇ ವಿಷಯದ ಬಗ್ಗೆ ಅನುಮಾನ ಬಂದರೂ ಸರ್ಚ್ ಇಂಜಿನ್ಗಳಿಗೆ ಹೋಗಿ ಪ್ರಶ್ನೆ ಮಾಡಿದರೆ ಉತ್ತರ ಸಿಗುತ್ತದೆ. ಈಗ ಹೆಚ್ಚಿನವರು ಅನಾರೋಗ್ಯಕ್ಕೂ ಮೊಬೈಲ್ ಮಾಹಿತಿಯನ್ನೇ ಆಧರಿಸುತ್ತಾರೆ ಎಷ್ಟರ ಮಟ್ಟಿಗೆ ಎಂದರೆ ವೈದ್ಯರಿಗೇ ಔಷಧದ ಬಗ್ಗೆ ಹೇಳಿಕೊಡುವಷ್ಟು ಆನ್ಲೈನ್ ಜ್ಞಾನ ಅಭಿವೃದ್ಧಿ ಆಗಿದೆ.
ಆದರೆ ಮಹಾರಾಷ್ಟ್ರದಲ್ಲಿ ಅಪ್ರಾಪ್ತೆ ಒಬ್ಬಳು ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಮಾಡಿಕೊಂಡಿದ್ದಾಳೆ. ನಂತರ ಹುಟ್ಟಿದ ಮಗುವನ್ನು ಕಟ್ಟಡದಿಂದ ಎಸೆದು ಕೊಂದಿದ್ದಾಳೆ. ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಅಲ್ಲಿನ ಉತ್ತಮ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದೆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ತಾಯಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಬಾಲಕಿ ಗರ್ಭಿಣಿಯಾಗಿರಬಹುದು ಎಂದು ಹೇಳಿದ್ದಾರೆ. ಅದರಂತೆ, ವೈದ್ಯರು ಸೋನೋಗ್ರಫಿ ಮಾಡಲು ಸಲಹೆ ನೀಡಿದರು. ಆದರೆ ಸೋನೋಗ್ರಫಿಗೆ ತಾಯಿ ಮತ್ತು ಬಾಲಕಿ ಒಪ್ಪಿಲ್ಲ.
ಯೂಟ್ಯೂಬ್ ನೋಡಿ ಹೆರಿಗೆ : ಕೆಲವು ದಿನಗಳ ನಂತರ ಅವರು ಇದ್ದ ಪ್ರದೇಶದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ರಾತ್ರೋರಾತ್ರಿ ಅಪ್ರಾಪ್ತೆ ಆಸ್ಪತ್ರೆ ಸೇರಿರುವುದು ತಿಳಿದುಬಂದಿದೆ. ನಂತರ ಆಕೆಯನ್ನು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟದ್ದಾಳೆ.
ತಾನು ಯೂಟ್ಯೂಬ್ನಲ್ಲಿ ಬರುವ ವಿಡಿಯೋ ನೋಡಿ, ಸ್ವತಃ ಹೆರಿಗೆ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಬಗ್ಗೆ ತಿಳಿದ ಮಹಿಳಾ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಹಾಗೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗ ಒತ್ತಾಯಿಸಿದೆ.
ಇದನ್ನೂ ಓದಿ : ಕಪಾಳಮೋಕ್ಷ ಮಾಡಿದ ತಾಯಿ ವಿರುದ್ಧ ದೂರು ನೀಡಲು ಠಾಣೆಗೆ ಬಂದ ಮಗು..!